ಚನ್ನಪಟ್ಟಣ: ಕುಮಾರಸ್ವಾಮಿ ನೀನು ಕೇವಲ ಹಿಟ್ ಅಂಡ್ ರನ್. ನೀನು ಬ್ಲಾಕ್ ಮೇಲ್ ಕುಮಾರಸ್ವಾಮಿ. ಎಲ್ಲರನ್ನು ಹೆದರಿಸಿದಂತೆ ಬಿಜೆಪಿಯವರನ್ನು ಹೆದರಿಸಲು ಹೋದೆ. ಪಾದಯಾತ್ರೆ ವಿಚಾರವಾಗಿ ಜಿ.ಟಿ ದೇವೆಗೌಡರ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ ಎಂಬುದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಚನ್ನಪಟ್ಟಣದಲ್ಲಿ ಇಂದು ಭಾನುವಾರ ನಡೆದ ಜನಾಂದೋಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್ ಅವರು, ನನ್ನ ಅಧ್ಯಕ್ಷತೆಯಲ್ಲಿ ನನ್ನ ಪಕ್ಷಕ್ಕೆ ೧೩೬ ಸೀಟು ಬಂದಿದೆ. ನಿನ್ನ ಅಧ್ಯಕ್ಷತೆಯಲ್ಲಿ ನಿನ್ನ ಪಕ್ಷಕ್ಕೆ ೧೯ ಸೀಟು ಬಂದಿದೆ. ಈಗ ನಿನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿದ್ದೀಯ. ಕುಮಾರಸ್ವಾಮಿ ನೀನು ಕೇವಲ ಹಿಟ್ ಅಂಡ್ ರನ್. ನೀನು ಬ್ಲಾಕ್ ಮೇಲ್ ಕುಮಾರಸ್ವಾಮಿ. ಎಲ್ಲರನ್ನು ಹೆದರಿಸಿದಂತೆ ಬಿಜೆಪಿಯವರನ್ನು ಹೆದರಿಸಲು ಹೋದೆ. ಪಾದಯಾತ್ರೆ ವಿಚಾರವಾಗಿ ಜಿ.ಟಿ ದೇವೆಗೌಡರ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನಿನ್ನ ಮಗನ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನೀನು ಒಂದು ಹೇಳಿಕೆ ನೀಡಿದೆ. ಈ ನಾಟಕ ಏಕೆ ಎಂದು ಪ್ರಶ್ನಿಸಿದರು.
ಪಾದಯಾತ್ರೆಗೆ ಬರಲ್ಲ ಎಂದು ಹೇಳಿದವನು, ಈಗ ಯಾಕೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದೀಯಾ ಕೇವಲ ನಿನ್ನ ಅಧಿಕಾರಕ್ಕೋಸ್ಕರ. ನಿನ್ನ ಪಕ್ಷವನ್ನು ಮುಳುಗಿಸಲು ಹೊರಟಿದ್ದೀಯಾ ಎಂದು ಮಾತಿನ ಮೂಲಕ ತಿವಿದರು. ಕುಮಾರಸ್ವಾಮಿ ಅವರು ಮಂಡ್ಯ ಚುನಾವಣೆ ವೇಳೆ ಎನ್ ಡಿಎ ಸರ್ಕಾರ ಬಂದರೆ ಐದು ನಿಮಿಷದಲ್ಲಿ ಮೋದಿ ಅವರ ಜತೆ ಮಾತಾಡಿ ಮೇಕೆದಾಟಿಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದರು. ಈಗ ನಾನು ಹಾಗೆ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಏನೆಲ್ಲಾ ಹೇಳಿದ್ದಾರೆ ಅವುಗಳನ್ನು ದೊಡ್ಡ ಪರದೆಯಲ್ಲಿ ಹಾಕಿಸಬೇಕು. ಅವರ ನವರಂಗಿ ಬಣ್ಣ ರಾಜ್ಯದ ಜನತೆಗೆ ಅರ್ಥವಾಗಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ನಿನಗೆ ಎರಡು ಖಾತೆ ನೀಡಿದೆ. ನೀನು ೧೦ ಸಾವಿರ ಜನರಿಗೆ ಕೆಲಸ ಕೊಡುವ ಕಾರ್ಖಾನೆ ಆರಂಭಿಸುತ್ತೇನೆ ಎಂದು ಹೇಳಿಕೆ ನೀಡಿದ್ದೀಯ. ಸಂತೋಷ ಆ ಕೆಲಸ ಮಾಡು. ನಮ್ಮ ಸರ್ಕಾರದಿಂದ ನಾವು ಸಹಕಾರ ನೀಡುತ್ತೇವೆ. ನೀವು ಎಲ್ಲೆಲ್ಲಿ ಅಂಗಡಿ ಇಟ್ಟಿದ್ದೀರಿ ನನಗೆ ಗೊತ್ತಿದೆ. ನೀನು ಅಧಿಕಾರದಲ್ಲಿದ್ದಾಗ ನಿನ್ನ ಜನರಿಗೆ ಒಂದು ಮನೆ, ನಿವೇಶನ ನೀಡಲಿಲ್ಲ. ನಿಮ್ಮ ಕಾರ್ಯಕರ್ತರಿಗೆ ಅಧಿಕಾರ ನೀಡಲಿಲ್ಲ. ನೀನು ನಿನ್ನ ಕುಟುಂಬ ಮಾತ್ರ ಅಧಿಕಾರ ಅನುಭವಿಸಿದ್ದೇ ಆಯ್ತು. ಯಡಿಯೂರಪ್ಪನವರು ಸದನದಲ್ಲಿ ನಿನ್ನ ಬಗ್ಗೆ ಮಾಡಿರುವ ಭಾಷಣದ ಬಗ್ಗೆ ನೀನು ಉತ್ತರ ನೀಡು ಸಾಕು ಎಂದು ಸವಾಲೆಸೆದರು.