ಮದ್ದೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವರ್ಗಾವಣೆ ದಂಧೆ, ಪ್ರತಿಯೊಂದು ಹುದ್ದೆಗೂ ರೇಟ್ ಕಾರ್ಡ್ ಫಿಕ್ಸ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಅವರಿಗೆ ಯಾವ ಹುದ್ದೆಗೆ ಎಷ್ಟು ರೇಟ್ ಅಂತ ಗೊತ್ತಿದೆ ಅನ್ಸುತ್ತೆ ಈ ವಿಚಾರದಲ್ಲಿ ನನಗೆ ಅನುಭವದ ಕೊರತೆ ಇರುವುದು ನಿಜ ಎಂದು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಅಧಿಕಾರಿಗಳ ವರ್ಗಾವಣೆ ಅನಿರ್ವಾಯ ಸರ್ವೇ ಸಾಮಾನ್ಯವಾಗಿರುತ್ತದೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.
ರಾಜ್ಯದ ಜನತೆಗೆ ಜನಪರ ಆಡಳಿತ ನೀಡಲು ಕೆಲ ಅಧಿಕಾರಿ ವರ್ಗಗಳನ್ನು ವರ್ಗಾವಣೆ ಮಾಡಬೇಕಾದ ಅನಿವಾರ್ಯತೆ ಇರುತ್ತದೆಯೇ ಹೊರತು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ವರ್ಗಾವಣೆ ಮಾಡಬೇಕೆಂದು ಗಂಭೀರವಾಗಿ ಸರ್ಕಾರ ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಮುಖಂಡ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಅವರು ಮದ್ದೂರಿನಲ್ಲಿ ತಮ್ಮ ಬೆಂಬಲಿಗರ ಜತೆಗೂಡಿ ಅಭಿನಂದನೆ ಸಲ್ಲಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಚಲುವರಾಯಸ್ವಾಮಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ನನ್ನನ್ನು ಅಭಿನಂದಿಸಿದ್ದಾರೆಯೇ ಹೊರತು ಇದರಲ್ಲಿ ರಾಜಕೀಯವಾದಂತ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಅವರು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಕೈ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಈಗ ಅವರು ನಮ್ಮ ವಿರೋಧ ಪಕ್ಷದವರು ಆದರೆ, ನಾವು ಬೇರೆ ಪಕ್ಷಗಳಲ್ಲಿದ್ದರೂ ನಾವು ಆತ್ಮೀಯ ಸ್ನೇಹಿತರಾಗಿದ್ದೇವೆ. ಹೀಗಾಗಿ ನಾವು ಸಚಿವರಾದ ನಂತರ ಮೊದಲ ಬಾರಿಗೆ ಅಭಿನಂದಿಸಿದ್ದಾರೆ ಎಂದು ತಿಳಿಸಿದರು.
ಗ್ಯಾರೆಂಟಿಕಾರ್ಡ್ ಯೋಜನೆಗಳ ಜಾರಿ ಪ್ರಕ್ರಿಯೆ ಕುರಿತು ಮೊದಲು ಎಲ್ಲರಿಗೂ ಅಂತ ಹೇಳಿ ಈಗಷರತ್ತುಗಳನ್ನು ಹಾಕುತ್ತಿದ್ದಾರೆ ಎಂದು ವಿರೋಧ ಪಕ್ಷದವರು ಮಾತನಾಡುತ್ತಿರುವ ವಿಷಯಕ್ಕೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಹೌದು ಕೆಲವೊಂದು ಷರತ್ತುಗಳನ್ನು ಹಾಕಬೇಕಾಗುತ್ತದೆ, ಕುಟುಂಬದಲ್ಲಿ ತೆರಿಗೆ ಪಾವತಿದಾರರು ಇದ್ದಾಗ 2000 ಹೇಗೆ ಕೊಡಲಿಕ್ಕೆ ಆಗುತ್ತದೆ ಎಂದರು.
ಮಂಡ್ಯ ಜಿಲ್ಲೆಯ ಜೀವನಾಡಿ ಮೈಶುಗರ್ಸ್ ಅಭಿವೃದ್ಧಿಗೆ ಈಗಾಗಲೇ 50 ಕೋಟಿ ರೂ ಗಳನ್ನು ಬಿಡುಗಡೆಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು.
ಶಾಸಕರಾದ ಕೆ.ಎಂ. ಉದಯ್, ರವಿಕುಮಾರ್ ಗಣಿಗ, ನಿವೃತ ಪ್ರಾಧ್ಯಾಪಕ ಪ್ರೋ ಬಿ.ಎಸ್. ಬೋರೇಗೌಡ. ಸಿದ್ದರಾಮಣ್ಣ, ವಳಗೆರೆಹಳ್ಳಿ ಮಧು ಸೇರಿದಂತೆ ಇತರರು ಇದ್ದರು.