Tuesday, December 16, 2025
Google search engine

Homeರಾಜ್ಯ66ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೆಚ್.ಡಿ.ಕೆ: ಪ್ರಧಾನಿ ಮೋದಿ ಶುಭಾಶೀರ್ವಾದದಿಂದ ಭಾವುಕ

66ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೆಚ್.ಡಿ.ಕೆ: ಪ್ರಧಾನಿ ಮೋದಿ ಶುಭಾಶೀರ್ವಾದದಿಂದ ಭಾವುಕ

ಬೆಂಗಳೂರು: ಜೆಡಿಎಸ್‌ ನಾಯಕ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಇಂದು ತಮ್ಮ 66ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹೆಚ್‌ಡಿಕೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವೇಳೆ ಜನ್ಮದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ ಅವರಿಗೆ ಹೆಚ್‌ಡಿ ಕುಮಾರಸ್ವಾಮಿ ಧನ್ಯವಾದ ಅರ್ಪಿಸಿದ್ದು, ಪ್ರಧಾನಿ ಅವರ ಶುಭಾಶೀರ್ವಾದಿಂದ ಭಾವುಕರಾಗಿರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಅವರ ಶುಭಾಶಯ ಹಾಗೂ ಶುಭಾಶೀರ್ವಾದದಿಂದ ನಾನು ಭಾವುಕನಾಗಿದ್ದೇನೆ ಮತ್ತು ವಿನೀತನಾಗಿದ್ದೇನೆ. ಅವರ ಪಿತೃವಾತ್ಸಲ್ಯಕ್ಕೆ ನಾನು ಧನ್ಯನಾಗಿದ್ದೇನೆ. ಮಾನ್ಯ ಪ್ರಧಾನಿಗಳ ಚಿಂತನಶೀಲ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನನ್ನ ಮೇಲಿನ ನಂಬಿಕೆಗೆ ನಾನು ಚಿರಋಣಿ ಆಗಿದ್ದೇನೆಂದು ತಿಳಿಸಿದ್ದಾರೆ.

ಇನ್ನೂ ಪ್ರಧಾನಮಂತ್ರಿಗಳ ಶುಭಾಶೀರ್ವಾದ ಮತ್ತು ಸಂದೇಶವು ಸಾರ್ವಜನಿಕ ಸೇವೆಯು ಕೇವಲ ಒಂದು ಜವಾಬ್ದಾರಿಯಲ್ಲ; ಬದಲಿಗೆ ರಾಷ್ಟ್ರ, ಸಮಾಜ ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ಜೀವಮಾನದ ಅನನ್ಯ ಸಮರ್ಪಣೆಯಾಗಿದೆ ಎಂಬುದನ್ನು ನೆನಪಿಸುತ್ತದೆ ಎಂದು ತಿಳಿಸಿದ್ದಾರೆ. ಸಮರ್ಪಣೆ, ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯ ಬಗ್ಗೆ ಅವರ ಮೆಚ್ಚುಗೆಯು ನನ್ನನ್ನು ಮತ್ತಷ್ಟು ಉತ್ತೇಜಿಸಿದೆ ಹಾಗೂ ರಾಷ್ಟ್ರಸೇವೆಗೆ ಸಮರ್ಪಿಸಿಕೊಳ್ಳಲು ಪ್ರೇರೇಪಣೆ ನೀಡಿದೆ.

ನನ್ನನ್ನು ಹರಸಿ ಆಶೀರ್ವದಿಸಿದ ಮಾನ್ಯ ಪ್ರಧಾನಿಗಳಿಗೆ ಕೃತಜ್ಞನಾಗಿದ್ದೇನೆ. ನನ್ನ ಮೇಲೆ ಅವರು ಇರಿಸಿರುವ ನಂಬಿಕೆಗೆ ನಾನು ಋಣಿಯಾಗಿದ್ದೇನೆ. ಸರ್, ತಮಗೆ ನನ್ನ ಹೃದಯಪೂರ್ವಕ ವಿನಮ್ರ ಧನ್ಯವಾದಗಳು ಎಂದು ಈ ಮೂಲಕ ತಿಳಿಸಿದ್ದಾರೆ. ಈ ನಡುವೆ ಜೆಡಿಎಸ್‌ ಕೂಡ ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದು, ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದೆ.

RELATED ARTICLES
- Advertisment -
Google search engine

Most Popular