ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಮುಸುಕಿನ ಗುದ್ದಾಟ ಮತ್ತೆ ಜೋರಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತಾಡಿದ್ದ ಡಿಸಿಎಂ ಡಿಕೆಶಿ, ರಾಜ್ಯದಲ್ಲಿ ಲೆಕ್ಕಕ್ಕೆ 3 ಪಕ್ಷ ಇದೆ. ಆದ್ರೆ ಆಟಕ್ಕೆ ಎರಡೇ ಪಕ್ಷಗಳಿವೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಟಾಂಟ್ ನೀಡಿದ್ರು. ಡಿಕೆಶಿ ಮಾತಿಗೆ ಟ್ವೀಟ್ ಮೂಲಕ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ರಾಜ್ಯ ರಾಜಕೀಯದಲ್ಲೂ ಆ್ಯಕ್ಟಿವ್ ಆಗಿರುವ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ನಾನಾ ರಣತಂತ್ರ ರೂಪಿಸುತ್ತಿದ್ದಾರೆ. ಇತ್ತ ಶೀಘ್ರವೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಡಿಕೆಶಿ ಹೇಳಿಕೆ ನೀಡಿದ್ದರೂ ಅಲ್ಲದೇ ನಾನು ಕುಮಾರಸ್ವಾಮಿಗಿಂತ ಅನುಭವಿ ಎಂದು ಹೇಳಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನೂ ಡಿಕೆಶಿ ಅವರ ಈ ಮಾತಿಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ, ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಮ್ಮ ವಿಲೀನದ ಚಿಂತೆ ಪಕ್ಕಕ್ಕಿಡಿ. ನನ್ನ, ನಿಮ್ಮ ಆಡಳಿತಾನುಭವದ ಬಗ್ಗೆ ಮಾತನಾಡೋಣ ಎನ್ನುತ್ತಾ ಕಿಡಿಕಾರಿದ್ದಾರೆ. ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ, ಅಲ್ಪ ಅವಧಿಗೆ ಪ್ರತಿಪಕ್ಷ ನಾಯಕ. ಈಗ ಕೇಂದ್ರ ಮಂತ್ರಿ. ನೀವೂ ಸುದೀರ್ಘ ಅವಧಿಗೆ ಶಾಸಕ, ಅನೇಕ ಬಾರಿ ಮಂತ್ರಿ. ಈಗ ಮಂತ್ರಿ ಉಪ ಮುಖ್ಯಮಂತ್ರಿ! ನಮ್ಮಿಬ್ಬರ ಆಡಳಿತಾನುಭವದ ಬಗ್ಗೆ ನೀವು ಹೇಳುವುದಲ್ಲ, ಜನರನ್ನೇ ಕೇಳಬೇಕು ಎಂದು ಕುಮಾರಸ್ವಾಮಿ ಬರೆದಿದ್ದಾರೆ.

ಅಲ್ಲದೆ ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್, ಫಿಕ್ಸಿಂಗ್, ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್ ಪೀರಿಯನ್ಸ್ ಅಲ್ಲಾ ಡಿಕೆಶಿರವರೇ. ಏನೋ.. ಜನರ ಆಶೀರ್ವಾದ ಮತ್ತು ದೇವರ ದಯೆಯಿಂದ ಸಿಕ್ಕಿದ ಅವಕಾಶದಲ್ಲಿ ಜನರಿಗೆ ಕೈಲಾದ ಸಹಾಯ ಮಾಡುವ ಹುಲು ರಾಜಕಾರಣಿ ನಾನಷ್ಟೇ. ನಿಮಗೆ ಸಿದ್ಧಿಸಿರುವ ಅಂತಹ ಭಾರೀ ಅನುಭವ ನನಗಿಲ್ಲ. ವಿನಮ್ರವಾಗಿ ಒಪ್ಪಿಕೊಳ್ಳುವೆ ಎಂದಿದ್ದಾರೆ.
ಒತ್ತುವರಿಯಲ್ಲೇ ನೀವೇ ನಿಸ್ಸೀಮರು : ನಿಮಗೆ ಭೂ ಕಬ್ಜ, ಒತ್ತುವರಿ ಕರತಲಾಮಲಕ. ಅದೇ ರೀತಿ ಮತ್ತೊಬ್ಬ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲಿಯೂ ನೀವು ನಿಸ್ಸೀಮರು. ಅದನ್ನಷ್ಟೇ ನಾನು ಹೇಳಿದ್ದು.. ತಾವು ಡಿಸಿಎಂ ಆಗಿರಬಹುದು. ಆದರೆ ಮಂತ್ರಿ ಪದವಿಗೆ ಇರುವಷ್ಟೇ ಶಿಷ್ಟಾಚಾರ, ಅಧಿಕಾರ ವ್ಯಾಪ್ತಿ ಆ ಹುದ್ದೆಗಿದೆ ಎನ್ನುವುದು ಗೊತ್ತಿಲ್ಲವೇ? ಅದಕ್ಕೇನು ಎಕ್ಸ್’ಟ್ರಾ ಕೊಂಬು, ಕೋಡು ಇರಲ್ಲ. ಇರಲಿ ಎಂದು ತಾವು ಸಿಕ್ಕಿಸಿಕೊಳ್ಳೋದಕ್ಕೂ ಬರಲ್ಲ. ನಿಮ್ಮ ಎಕ್ಸ್ ಪೀರಿಯನ್ಸ್ ಗೆ ಈ ಸಣ್ಣ ವಿಷಯವೂ ತಟ್ಟಲಿಲ್ಲವೇ ಮಿಸ್ಟರ್ ಡಿಕೆಶಿ ಅವರೇ!!?? ಎಂದು ಬರೆಯುವ ಮೂಲಕ ಡಿಕೆಶಿಗೆ ಎಚ್ಡಿಕೆ ಟಾಂಗ್ ಕೊಟ್ಟಿದ್ದಾರೆ.
ಇನ್ನೂ ಇದೇ ವೇಳೆ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯನ್ನು ಗೃಹ ಸಚಿವರೇ ನಡೆಸಬೇಕಿತ್ತು. ಅದು ಅವರ ಅಧಿಕಾರ ವ್ಯಾಪ್ತಿ. ಅವರು ಬಿಟ್ಟರೆ ಮುಖ್ಯಮಂತ್ರಿಗಳು ಅಂಥ ಸಭೆ ನಡೆಸಬಹುದು. ನೀವು ಸಭೆ ನಡೆಸಿದ್ದು ಶಿಷ್ಟಾಚಾರ, ಅಧಿಕಾರದ ಸ್ಪಷ್ಟ ಉಲ್ಲಂಘನೆ. ಇದನ್ನು ಆಡಳಿತಾನುಭವ, ಸೀನಿಯಾರಿಟಿ ಎಂದು ಬೆನ್ನು ತಟ್ಟಿಕೊಳ್ಳುತ್ತೀರಾ? ಹೋಗಲಿ, ನೀವು ಮೀಟಿಂಗ್ ಮಾಡಿ ಎಂದು ಗೃಹ ಸಚಿವರು, ಸಿಎಂ ಅವರು ಹೇಳಿದ್ದರಾ? ಇಲ್ಲವಲ್ಲ. ಅದಕ್ಕೇ ನಾನು ಹೇಳಿದ್ದು; ಅವರೇನು ಹೆಬ್ಬೆಟ್ಟು ಗೃಹ ಮಂತ್ರಿಗಳಾ? ಅಥವಾ ರಬ್ಬರ್ ಸ್ಟ್ಯಾಂಪ್ ಗೃಹ ಮಂತ್ರಿಗಳಾ? ಎಂದು. ಒಬ್ಬ ಹಿರಿಯ ಮಂತ್ರಿಯ ಖಾತೆಯನ್ನು ನೀವು ಹೀಗೆ ಅಕ್ರಮವಾಗಿ ಒತ್ತುವರಿ ಮಾಡುವುದಕ್ಕೆ ಸಂವಿಧಾನದಲ್ಲಿ ವಿಶೇಷ ತಿದ್ದುಪಡಿ ಏನನ್ನಾದರೂ ಮಾಡಿಸಿದ್ದೀರ? ಎಂದಿದ್ದಾರೆ.
ಅಲ್ಲದೆ ನಿಮ್ಮದು ಭಾರೀ ಅನುಭವ, ಸಿಕ್ಕಾಪಟ್ಟೆ ಸೀನಿಯಾರಿಟಿ!! ಇಂಥ ಸಣ್ಣ ವಿಷಯ ನಿಮಗೇಕೆ ತಿಳಿಯಲಿಲ್ಲ ಮಿಸ್ಟರ್ ಡಿಕೆಶಿ ಅವರೇ? ಎನ್ನುತ್ತಲೇ ಕುಮಾರಸ್ವಾಮಿ ಕುಟುಕಿದ್ದಾರೆ.



