ದೇವನಹಳ್ಳಿ, ಡಿ,22: ಅನೈತಿಕ ಸಂಬಂಧ ಇಟ್ಟುಕೊಂಡು ಸಂಗಾತಿ ಕೈಲಿ ಸಿಕ್ಕಿಬಿದ್ದು ಒದೆ ತಿಂದಿರುವ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿವೆ. ಆದರೆ ಅನೈತಿಕ ಸಂಬಂಧ ಮುಂದುವರೆಸುವುದು ಬೇಡವೆಂದ ಯುವಕನ ಮೇಲೆ ಮಹಿಳೆಯೇ ಗ್ಯಾಂಗ್ ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾರ್ತಿಕ್ ಎಂಬ ಯುವಕ ದೀಪಾ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮನೆಯವರ ಬುದ್ದಿವಾದದ ಬಳಿಕ ಆಕೆಯ ಸಹವಾಸವನ್ನೇ ಮಾಡಬಾರದೆಂದು ನಿರ್ಧಾರ ಮಾಡಿ, ಆಕೆಯ ಸಹವಾಸವನ್ನು ಸಂಪೂರ್ಣವಾಗಿ ತೊರೆದಿದ್ದ. ಇದರಿಂದ ಆಕ್ರೋಶಗೊಂಡ ದೀಪಾ, ಆತನ ಮೇಲೆ ಅಟ್ಯಾಕ್ ಮಾಡಿಸಲು ಮುಂದಾಗಿದ್ದಳು. ಡಿಸೆಂಬರ್ 13ರ ಮುಸ್ಸಂಜೆ, ಕಾರ್ತಿಕ್ ಅಂಗಡಿಯೊಂದರಲ್ಲಿದ್ದಾಗ ಕಾರಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಬಂದ ದೀಪಾ, ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿಸಿದ್ದಾಳೆ.
ಘಟನೆ ವೇಳೆ ದೀಪಾ ಕಾರಿನಲ್ಲೇ ಕುಳಿತಿದ್ದರೆ, ಆಕೆಯೊಂದಿಗೆ ಬಂದಿದ್ದ ಆರೋಪಿಗಳು ಅಂಗಡಿಯ ಬಳಿ ಇದ್ದ ಕಾರ್ತಿಕ್ ಮೇಲೆ ಲಾಂಗ್ ಹಾಗೂ ಮಚ್ಚುಗಳಿಂದ ದಾಳಿ ನಡೆಸಿದ್ದರು. ಯುವಕನ ಅದೃಷ್ಟವೆಂಬಂತೆ ದಾಳಿಯ ವೇಳೆ ಸಾರ್ವಜನಿಕರು ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದರು. ಇದರಿಂದ ಭಯಗೊಂಡ ದೀಪಾ ಆ್ಯಂಡ್ ಗ್ಯಾಂಗ್, ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಕುರಿತು ದೂರು ದಾಖಲಾಗುತ್ತಿದ್ದಂತೆ ದೊಡ್ಡಬೆಳವಂಗಲ ಪೊಲೀಸರು ತನಿಖೆ ಆರಂಭಿಸಿದ್ದು, ಇದೀಗ ಹಲ್ಲೆಗೆ ಸಂಚು ರೂಪಿಸಿ ಎಸ್ಕೇಪ್ ಆಗಿದ್ದ ದೀಪಾ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳ ಪಾತ್ರವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



