ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬಸ್ ಚಾಲಕನ ಅಜಾಗರೂಕತೆ ಹಾಗೂ ಓವರ್ ಟೇಕ್ ಮಾಡಲು ಹೋಗಿ ಎದುರುಗಡೆ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಯಲಾಗಿ ಕಾರಿನಲ್ಲಿದ್ದ ಒರ್ವ ವ್ಯಕ್ತಿ ಸಾವನ್ನಪ್ಪಿದರೆ ಮತ್ತೊರ್ವ ವ್ಯಕ್ತಿಗೆ ಗಂಭೀರವಾಗಿ ಗಾಯಗೊಂಡಿದ್ದು ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಗಳಿಗೆಕೆರೆ ಗೇಟ್ ಬಳಿಯ ಹಾಸನ – ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಬಿ.ಹೊಸಹಳ್ಳಿ ಗ್ರಾಮದ ಕೃಷ್ಣೇಗೌಡರ ಪುತ್ರ ಸುನೀಲ್ ( 36) ಎಂಬ ದುರ್ದೈವಿಯಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ಬೇಲೂರಿನ ರಮೇಶ್ (53) ಅವರನ್ನು ಮೈಸೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಸುನೀಲ್ ಮೈಸೂರಿನ ಅಂಬುಜ ಸಿಮೆಂಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು, ಹಾಗೂ ಬೇಲೂರಿನ ರಮೇಶ್ ಮೈಸೂರಿನಲ್ಲಿ ಬೇಕರಿ ನಡೆಸುತ್ತಿದ್ದು ಈ ಇಬ್ಬರು ಮೈಸೂರಿನಲ್ಲಿ ವಾಸವಿದ್ದರು ಎನ್ನಲಾಗಿದ್ದು, ಇಂದು ಬೆಳಗ್ಗೆ ಸುನೀಲ್ ತಮ್ಮ ನಿಸಾನ್ ಕಂಪನಿಯ ಮ್ಯಾಗ್ನೇಟ್ವ ಕಾರಿನಲ್ಲಿ ಮೈಸೂರಿನಿಂದ ಮೂಡಿಗೆರೆಗೆ ಪ್ರಯಾಣ ಬೆಳಸಿದ್ದು ಕೆ.ಆರ್.ನಗರ ತಾಲೂಕಿನ ಗಳಿಗೆಕೆರೆ ಗೇಟ್ ಬಳಿಯ ಹಾಸನ – ಮೈಸೂರು ಹೆದ್ದಾರಿಯಲ್ಲಿ ಹಾಸನ ಕಡೆಯಿಂದ ಅತಿವೇಗವಾಗಿ ಬರುತ್ತಿದ್ದ ಚಿಕ್ಕಮಗಳೂರು ಘಟಕಕ್ಕೆ ಸೇರಿದ ಬಸ್ ಕೇರಳ ರಾಜ್ಯದ ಕಲ್ಲಿಕೋಟೆಗೆ ಹೋಗುತ್ತಿದ್ದು ಬಸ್ ಇನ್ನೊಂದು ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ಎದುರುಗಡೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಮೇತ ಪಕ್ಕದಲ್ಲಿದ್ಸ ಗದ್ದೆಗೆ ಬಸ್ ಉರುಳಿ ಬಿದ್ದಿದೆ, ಕಾರಿನಡಿ ಸಿಲುಕಿಕೊಂಡಿದ್ದ ಇಬ್ಬರು ವ್ಯಕ್ತಿಗಳಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದು ಅಲ್ಲಿದ್ದ ಸ್ಥಳೀಯರು ಕೂಡಲೇ ಜೆಸಿಬಿ ಯಂತ್ರದ ಮೂಲಕ ಕಾರಿನಡಿ ಸಿಲುಕಿದ ಇಬ್ಬರನ್ನು ಹೊರತೆಗೆದು ಆಂಬುಲೆನ್ಸ್ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅದೇ ಆಂಬುಲೆನ್ಸ್ ಇಬ್ಬರು ವ್ಯಕ್ತಿಗಳನ್ನು ಕಳುಹಿಲಾಗಿ ತೀವ್ರ ಸ್ವರೂಪವಾಗಿ ಗಾಯಗೊಂಡಿದ್ದ ಸುನೀಲ್ ಮಾರ್ಗಮದ್ಯೆ ಕೊನೆಯುಸಿರೆಳಿದಿದ್ದಾರೆ. ಸುನೀಲ್ ಅವರಿಗೆ ವಿವಾಹವಾಗಿ ವಿಚ್ಚೇದನವಾಗಿತ್ತು ಎನ್ನಲಾಗಿದೆ. ಸುನೀಲ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಈತನ್ಮದ್ಯೆ ರಮೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಸ್ ನಲ್ಲಿದ್ದ ಅಂದಾಜು 90 ಮಂದಿಗೆ ಯಾವುದೇ ಗಾಯಗಳಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವ ಪ್ರಕಾಶ್ ಅಪಘಾತ ದೂರು ದಾಖಲಿಸಿ ಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.