ಮೈಸೂರು: ಹದಿಹರೆಯದ ಶಾಲಾ ಮಕ್ಕಳಿಗೆ ಆರೋಗ್ಯದ ಅರಿವು ಬಹಳ ಮುಖ್ಯವಾಗಿದ್ದು ಶಾಲೆಗಳಲ್ಲಿ ಪ್ರತಿವರ್ಷ ಖಾಯಂ ಆಗಿ ಅರಿವು ಕಾರ್ಯಕ್ರಮಗಳನ್ನು ಸರ್ಕಾರ ಮಾಡಬೇಕು ಎಂದು ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಒತ್ತಾಯಿಸಿದರು.
ವರುಣಾಕ್ಷೇತ್ರದ ಸಿದ್ದರಾಮಹುಂಡಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಡೆದ ಶಾಲಾ ಆರೋಗ್ಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೈಸೂರು ವೈದ್ಯಕೀಯ ಕಾಲೇಜು ೧೦೦ ವರ್ಷ ಪೂರೈಸುತ್ತಿರುವುದು ಹೆಮ್ಮೆಯ ವಿಷಯ. ಈ ಸಂಸ್ಥೆಯಿಂದ ಸಾವಿರಾರು ವೈದ್ಯರು ಹೊರಹೊಮ್ಮಿ ಪ್ರಪಂಚದಾದ್ಯಂತ ಸೇವೆ ಮಾಡುತ್ತಿದ್ದಾರೆ. ಲಕ್ಷಾಂತರ ಜನರ ಆರೋಗ್ಯ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ೮, ೯ ಮತ್ತು ೧೦ನೆಯ ತರಗತಿಯ ೧೩ ರಿಂದ ೧೬ನೆಯ ವಯಸ್ಸಿನ ಮಕ್ಕಳಿಗೆ ಮಾಡುತ್ತಿರುವ ಅರಿವು ಕಾರ್ಯಾಗಾರ ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಹೋಗುವ ಘಟ್ಟವಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಲ್ಲಿ ಲೈಂಗಿಕತೆ ಬಗ್ಗೆ ಮುಜುಗರ ಇರಬಾರದು, ಸರಿಯಾದ ತಿಳುವಳಿಕೆ ಇರಬೇಕು, ಗುಣಮಟ್ಟದ ಆಹಾರವನ್ನು ಸೇವಿಸಬೇಕು, ಕೆಟ್ಟ ಚಟಗಳಿಗೆ ಬಲಿಯಾಗಬಾರದು ಎಂದ ಅವರು ಇಂತಹ ಅರಿವು ಕಾರ್ಯಕ್ರಮಗಳಿಗೆ ಸರ್ಕಾರದಿಂದ ಸಹಕಾರ ನೀಡಲು ಪ್ರಯತ್ನಿಸುತ್ತೇನೆ. ಸಿದ್ದರಾಮಯ್ಯಹುಂಡಿ ಶಾಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡಿಕೊಡುವುದಾಗಿ ತಿಳಿಸಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ
ಡಾ. ದಾಕ್ಷಾಯಿಣಿ ಮಾತನಾಡಿ ನಮ್ಮ ಸಂಸ್ಥೆ ವತಿಯಿಂದ ಪ್ರತಿವರ್ಷ ಅರಿವು ಕಾರ್ಯಕ್ರಮ ಮಾಡುತ್ತಿದ್ದೇವೆ. ೮, ೯, ೧೦ನೆಯ ತರಗತಿ ಮಕ್ಕಳಿಗೆ ಆರೋಗ್ಯದ ಅರಿವು ಮೂಡಿಸಿದರೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಸಮಾರಂಭದಲ್ಲಿ ಡಾ. ಹೆಚ್.ಎನ್. ದಿನೇಶ್, ಡಾ. ಹೆಚ್. ಪರಮೇಶ್ವರ, ಡಾ. ಮಾಲೇಗೌಡ, ಡಾ. ಯೋಗೀಶ್, ಪ್ರಾಂಶಪಾಲೆ ರಾಜಶ್ರೀ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಶಿವಸ್ವಾಮಿ, ಪ್ರದೀಪ್‌ಕುಮಾರ್, ಬಿಆರ್‌ಸಿ ಮಹಾದೇವ, ಮುಖ್ಯಶಿಕ್ಷಕ ಮಾಯಾಂಗ, ಮುಖಂಡರಾದ ಕೆಂಪೀರಯ್ಯ, ಪುಟ್ಟಣ್ಣ, ಮಹೇಂದ್ರ, ಮಂಜುಳ ಮಂಜುನಾಥ್, ಬಸವರಾಜು, ಎಂ.ಟಿ. ರವಿಕುಮಾರ್, ಮಾರ್ಬಳ್ಳಿ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ, ಗ್ರಾ.ಪಂ. ಅಧ್ಯಕ್ಷೆ ಪುಟ್ಟಮ್ಮ, ಸಿದ್ದರಾಮು ಹಾಜರಿದ್ದರು.