ಹೆಚ್.ಡಿ. ಕೋಟೆ : ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ವತಿಯಿಂದ ತಾಲ್ಲೂಕಿನ ಬಸವನಗಿರಿ ಆಶ್ರಮಶಾಲೆ ಮೇಟಿಕುಪ್ಪೆ, ಆಶ್ರಮಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ಆರೋಗ್ಯ ತಪಾಸಣೆ ನಡೆಸಲಾಯಿತು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ಮಾತನಾಡಿ ನಮ್ಮ ಸಂಸ್ಥೆಯ ವತಿಯಿಂದ ಇದು ೩ನೇ ಕ್ಯಾಂಪ್ ಆಗಿದ್ದು, ಜೆ.ಎಸ್.ಎಸ್. ಉನ್ನತಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ವಾಕ್ ಮತ್ತು ಶ್ರವಣ ಸಂಸ್ಥೆಯ ಸಹಯೋಗದಲ್ಲಿ ಆಶ್ರಮಶಾಲೆಗಳಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದೇವೆ. ೩ ಆರೋಗ್ಯ ಶಿಬಿರಗಳಿಂದ ಇದುವರೆಗೆ ೫೨೦ ಮಕ್ಕಳಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗಿದ್ದು ತಪಾಸಣೆಯಲ್ಲಿ ಕಿವಿ, ಮೂಗು, ಗಂಟಲು, ಶ್ರವಣ ಪರೀಕ್ಷೆ, ವಾಕ್‌ಪರೀಕ್ಷೆ, ಕಣ್ಣು ದಂತಚಿಕಿತ್ಸೆ, ರಕ್ತಪರೀಕ್ಷೆ ಮಾಡಲಾಗುತ್ತಿದೆ. ೩೦ ಮಕ್ಕಳಿಗೆ ಹೆಚ್ಚಿನ ದಂತ ಚಿಕಿತ್ಸೆಗೆ ಡೆಂಟಲ್ ಕಾಲೇಜಿಗೆ ಕಳುಹಿಸಲಾಗುವುದು. ೫೫ ಮಕ್ಕಳಿಗೆ ಹುಳುಕಲ್ಲು ಬರದ ಹಾಗೆ ಚಿಕಿತ್ಸೆ ನೀಡಲಾಗಿದೆ.
ಆಶ್ರಮಶಾಲೆಯ ಹೆಚ್ಚಿನ ಮಕ್ಕಳಿಗೆ ರಕ್ತಹೀನತೆ ಇದ್ದು ಸರ್ಕಾರ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀಡುವ ಕ್ಷೀರಭಾಗ್ಯ ಯೋಜನೆಯನ್ನು ಆಶ್ರಮಶಾಲೆಯ ವಿದ್ಯಾರ್ಥಿಗಳಿಗೆ ವಿಸ್ತರಿಸಿದರೆ ಮಕ್ಕಳಲ್ಲಿರುವ ರಕ್ತಹೀನತೆಯನ್ನು ಕಡಿಮೆ ಮಾಡಬಹುದು ಎಂದ ಅವರು ಮುಂದಿನ ಆರೋಗ್ಯತಪಾಸಣಾ ಶಿಬಿರವನ್ನು ಚಾಮರಾಜನಗರ ಜಿಲ್ಲೆಯಲ್ಲಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ. ರವೀಶ್‌ಗಣಿ, ಜೆ.ಎಸ್.ಎಸ್. ಆಸ್ಪತ್ರೆಯ ಮಕ್ಕಳ ದಂತ ತಜ್ಞರಾದ ಡಾ. ಇಂದಿರಾ ಎಂ.ಡಿ., ಡಾ. ಮಹಾದೇವಪ್ಪ, ಡಾ. ಅರುಣ್, ಡಾ. ಪ್ರಶಾಂತ್, ಡಾ. ಚೇತಕ್, ಡಾ. ಜ್ಯೋತಿ ಹೆಚ್.ಪಿ., ತಾಲ್ಲೂಕು ಕಲ್ಯಾಣಾದಿಕಾರಿ ಹನುಮಂತರಾಯಪ್ಪ, ಮುಖ್ಯಶಿಕ್ಷಕ ಬಿ.ಕೆ. ನಂಜಯ್ಯ, ಕಛೇರಿ ಅಧೀಕ್ಷಕ ನಾಗರಾಜ್ ಹಾಗೂ ಆಶ್ರಮಶಾಲೆಯ ಶಿಕ್ಷಕರು ಹಾಜರಿದ್ದರು.