ತುಮಕೂರು: ಸಚಿವರ ಮೇಲೆ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡು ಸಿಎಂಗೆ ಪತ್ರ ಬರೆದಿರುವ ವಿಚಾರದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ನನಗೆ ಅದರ ಬಗ್ಗೆ ಗೊತ್ತಿಲ್ಲ, ನಿನ್ನೆ ಸಿಎಂ ಸಿಕ್ಕಿದ್ರು ಅದರ ಬಗ್ಗೆ ಏನೂ ಮಾತಾಡಿಲ್ಲ ಎಂದು ತಿಳಿಸಿದ್ದಾರೆ.
ಇಂದು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಸಿಂಗಾಪುರ ಆಪರೇಷನ್ ವಿಚಾರ ಕುರಿತು ಮಾತನಾಡಿ, ಅದರ ಬಗ್ಗೆ ನಮ್ಮ ಅಧ್ಯಕ್ಷರು ಮಾತನಾಡಿದ್ದಾರಲ್ಲ, ಅವರಿಗೆ ಅದರ ಬಗ್ಗೆ ವಿಶೇಷವಾಗಿ ಮಾಹಿತಿ ಇರಬಹುದು ಎಂದರು.
ಖಂಡಿತವಾಗಿಯೂ ಜೆಡಿಎಸ್ ಬಿಜೆಪಿ ಒಂದಾಗಿರೋದು ಸತ್ಯ. ಅವರು ಷಡ್ಯಂತ್ರ ಮಾಡ್ತಾ ಇರಬಹುದು. ಆದರೆ ನಾವು ಒಗ್ಗಟ್ಟಾಗಿದ್ದೇವೆ. ಐದು ವರ್ಷ ನಾವು ಅಧಿಕಾರ ನಡೆಸ್ತಿವಿ ಒಳ್ಳೆ ಆಡಳಿತ ಕೊಡ್ತಿವಿ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಅವ್ಯವಹಾರಗಳನ್ನು ಹಾಗೂ ಕೋವಿಡ್ ಕಾಲದಲ್ಲಿ ನಡೆದ ಎಲ್ಲಾ ಅವ್ಯವಹಾರಗಳು, ಅವರು ಖರೀದಿ ಮಾಡಿದ ಔಷಧಿ, ಸಲಕರಣೆಗಳ ಬಗ್ಗೆ ತನಿಖೆ ಮಾಡಿಸುತ್ತೇವೆ. ಇದು ದ್ವೇಷದ ರಾಜಕಾರಣ ಅಲ್ಲ, ತನಿಖೆ ಮಾಡಿಸುವ ಬಗ್ಗೆ ನಾವು ಚುನಾವಣೆಯಲ್ಲೇ ಹೇಳಿದ್ದೇವೆ. ಯಾವ ರೀತಿಯ ತನಿಖೆಯಾಗಬೇಕು ಅನ್ನೋದನ್ನು ಸಿಎಂ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಈ ಕುರಿತು ಪಬ್ಲಿಕ್ ಅಕೌಂಟ್ ಕಮಿಟಿ ವರದಿ ನೀಡಲಾಗಿದೆ. ಈ ವರದಿಯಲ್ಲಿ ಅವ್ಯವಹಾರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಎಲ್ಲವನ್ನೂ ಸಂಪೂರ್ಣವಾಗಿ ತನಿಖೆ ಮಾಡುತ್ತೇವೆ ಎಂದರು.