ಮೈಸೂರು: ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಮತೋಲನ ಆಹಾರ ಸೇವನೆ ಅಗತ್ಯ ಎಂದು ಸಿಡಿಪಿಒ ಭವ್ಯಶ್ರೀ ತಿಳಿಸಿದರು.
ನಂಜನಗೂಡು ತಾಲೂಕು ಹಳ್ಳಿದಿಡ್ಡಿ ಗ್ರಾಮದಲ್ಲಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಿಳಿಗೆರೆ ಯೋಜನೆ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಪೋಷನ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಆರೋಗ್ಯಯುತ ಜೀವನ ನಡೆಸಲು ಶೇ. 80ರಷ್ಟು ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಬೇಕು ಎಂದು ಹೇಳಿದರು.
ರಾಗಿ ಮುದ್ದೆ, ಅನ್ನ ಮಾತ್ರ ತಿನ್ನುವುದರಿಂದ ದೇಹಕ್ಕೆ ಪೌಷ್ಟಿಕಾಂಶ ದೊರೆಯುವುದಿಲ್ಲ. ಇದರ ಜೊತೆಗೆ ಬೇಳೆ-ಕಾಳುಗಳು, ಸೊಪ್ಪು, ಹಸಿರು ತರಕಾರಿ, ಮೊಟ್ಟೆ, ಹಾಲು, ಹಣ್ಣುಗಳನ್ನು ಸೇವಿಸಿದಲ್ಲಿ ಅಗತ್ಯ ಖನಿಜಾಂಶ, ಜೀವಸತ್ವಗಳು ದೇಹಕ್ಕೆ ಲಭಿಸಿ ಮಲಬದ್ಧತೆ, ರಕ್ತಹೀನತೆ, ಅಪೌಷ್ಟಿಕತೆಯಿಂದ ದೂರವಿರಬಹುದು ಹಾಗಾಗಿ ಮಹಿಳೆಯರು ಸರ್ಕಾರದಿಂದ ಉಚಿತವಾಗಿ ದೊರೆಯುವ ಎಲ್ಲಾ ಆರೋಗ್ಯ ಸೌಲಭ್ಯಗಳ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪಿಡಿಒ ಆಶಾ ಮಾತನಾಡಿ, ನಮ್ಮ ಪೂರ್ವಜರು ಸರಿಯಾದ ಆಹಾರ ಕ್ರಮವನ್ನು ಅನುಸರಿಸುತ್ತಿದ್ದ ಪರಿಣಾಮ ಅವರ ಆರೋಗ್ಯ ತುಂಬಾ ಚೆನ್ನಾಗಿರುತ್ತಿತ್ತು. ಆದರೆ, ಆಧುನಿಕ ಕಾಲದ ಪೀಳಿಗೆಯವರು ರಾಸಾಯನಿಕ ವಸ್ತುಗಳನ್ನು ಬಳಸಿ ಬೆಳೆಸಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಎಂದು ಹೇಳಿದರು. ಮಕ್ಕಳ ಆರೋಗ್ಯ ತಾಯಂದಿರ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಮಕ್ಕಳ ಬೆಳವಣಿಗೆ, ಪೋಷಣೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಹೇಳಿದರು.
ಕುಟುಂಬದವರ ಆರೋಗ್ಯದ ಜವಾಬ್ದಾರಿ ಮಹಿಳೆಯರ ಮೇಲಿರುವುದರಿಂದ ಸರಿಯಾದ ಆಹಾರ ಕ್ರಮದ ಬಗ್ಗೆ ಮಹಿಳೆಯರಿಗೆ ಮೊದಲು ತಿಳುವಳಿಕೆ ಇರಬೇಕು. ನಾರಿನಂಶ ಹೇರಳವಾಗಿರುವ ಸಿರಿಧಾನ್ಯಗಳನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸಬೇಕು ಎಂದು ತಿಳಿಸಿದರು. ಆರಕ್ಷಕ ನಿರೀಕ್ಷಕ ಗೋಪಾಲಕೃಷ್ಣ ಮಾತನಾಡಿ, ಕೆಲವು ವರ್ಷಗಳ ಹಿಂದೆ ಬಾಲ್ಯ ವಿವಾಹದಂತಹ ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಸಧ್ಯ, ಇದು ಕಡಿಮೆಯಾಗುತ್ತಾ ಬರುತ್ತಿದ್ದರೂ , ಇದನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣ ಮಾಡಬೇಕಾಗಿದೆ. ಹಾಗಾಗಿ, ಅಂಗನವಾಡಿ, ಆಶಾ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಡಿಪಿಒ ಮಂಜುಳಾ, ಗ್ರಾ.ಪಂ.ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷೆ ಮಹದೇವಮ್ಮ, ವೈದ್ಯಾಧಿಕಾರಿ ಡಾ. ಆನಂದಕುಮಾರ್, ಮುಖ್ಯ ಶಿಕ್ಷಕ ಸಚ್ಚಿದಾನಂದ, ಸ್ನೇಹ ಸಂಸ್ಥೆಯ ಯೋಗಿಶ್ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.