ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಎಲ್ಲರೂ ಉತ್ತಮ ಹವ್ಯಾಸ ರೂಡಿಸಿಕೊಳ್ಳುವ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ ಮಾಡುವಂತೆ ರಾವಂದೂರು ಕೆಪಿಎಸ್ ಕಾಲೇಜು ಆಂಗ್ಲ ಭಾಷೆ ಉಪನ್ಯಾಸಕರಾದ ಲಕ್ಷ್ಮಿಕಾಂತ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಟ್ಟದಪುರ ವಲಯ ವತಿಯಿಂದ ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ದೇಶದ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ ಮಹತ್ವದ್ದಾಗಿದ್ದು ಮಾದಕ ವಸ್ತು ಸೇವನೆ ಹಾಗೂ ದುಶ್ಚಟಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು, ದುಶ್ಚಟಗಳಿಂದ ಕುಟುಂಬದ ನೆಮ್ಮದಿ ಹಾಳಾಗುವುದಲ್ಲದೆ ಇತರರಿಂದ ದೂಷಣೆ ಪಡಬೇಕಾಗುತ್ತದೆ ಆದುದರಿಂದ ಉತ್ತಮ ಹವ್ಯಾಸ ರೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಸಮಾಜದ ಬದಲಾವಣೆಗೆ ತಮ್ಮ ಕೈಲಾದ ಕೊಡುಗೆ ನೀಡುವಂತೆ ತಿಳಿಸಿದರು
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ಉಪಾಧ್ಯಕ್ಷ
ಬಿ.ಜೆ ದೇವರಾಜ್ ಮಾತನಾಡಿ ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಏರುಪೇರು ಆಗುವ ಮೂಲಕ ಕಾಯಿಲೆಗಳಿಗೆ ತುತ್ತಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಎಚ್ಚೆತ್ತು ಎಲ್ಲರೂ ಉತ್ತಮ ಆರೋಗ್ಯದ ಕಡೆ ಗಮನ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೂ ಸಹಕರಿಸಬೇಕು ಎಂದರು.
ಬೆಟ್ಟದಪುರ ಒಕ್ಕೂಟದ ಅಧ್ಯಕ್ಷೆ ರೂಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯುವ ಜನತೆ ಆರೋಗ್ಯಕರ ಜೀವನ ನಡೆಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಪದ್ಮಾವತಿ, ಕಾಲೇಜಿನ ಹಿರಿಯ ಉಪನ್ಯಾಸಕರು, ವಲಯ ಮೇಲ್ವಿಚಾರಕಿ ಸುನಿತಾ ಶೆಟ್ಟಿ, ಉಪನ್ಯಾಸಕರಾದ ರಘುವೀರ್, ಸೇವಾ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.