ರಾಮನಗರ: ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಕುರಿತು ಪ್ರತಿ ತಿಂಗಳ ೯ನೇ ತಾರೀಖು ಮತ್ತು ೨೪ನೇ ತಾರೀಖಿನಂದು ಗಂಡಾಂತರ ಗರ್ಭಿಣಿಯರಿಗೆ ವಿಶೇಷ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದ್ದು ಗರ್ಭಿಣಿ ಸ್ತ್ರೀಯರು ಸದುಪಯೋಗ ಪಡೆದುಕೊಳ್ಳುವಂತೆ ವೈದ್ಯಾಧಿಕಾರಿ ಡಾ. ಹರ್ಷಿತ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮೆಹಬೂಬ್‌ನಗರ ಇವರ ಸಹಯೋಗದಲ್ಲಿ ಆಸ್ಪತ್ರೆ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯ ತಪಾಸಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗರ್ಭಾವಸ್ಥೆಯಲ್ಲಿ ಕಂಡುಬರುವ ಅಪಾಯಕಾರಿ ಚಿಹ್ನೆ ಮತ್ತು ಅವುಗಳ ನಿರ್ವಹಣೆ ಬಗ್ಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ. ಕೆ.ಜೆ ಅವರು ಮಾತನಾಡಿ, ಗಂಡಾಂತರ ಗರ್ಭಿಣಿಯರು ನಿಯಮಿತವಾಗಿ ತಪಾಸಣೆಯನ್ನು ಮಾಡಿಸಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಸರಿಯಾದ ಸಮಯಕ್ಕೆ ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಲ್ಲಿ ರಕ್ತ ಹೀನತೆ ಸಮಸ್ಯೆ ಕಂಡುಬರುತ್ತಿರುವುದರಿಂದ ಕಬ್ಬಿಣಾಂಶದ ಮಾತ್ರೆ ಜೊತೆಗೆ ಸ್ಥಳೀಯವಾಗಿದೊರೆಯುವ ಕಬ್ಬಿಣಾಂಶ ಯುಕ್ತ ತರಕಾರಿ, ಸೊಪ್ಪು, ಹಣ್ಣುಗಳನ್ನು ದೈನಂದಿನ ಆಹಾರದಲ್ಲಿ ಸೇವಿಸುವಂತೆ ತಿಳಿಸಿದರು.
ಗರ್ಭಿಣಿ ಸ್ತ್ರೀಯರು ತಾಯಿಕಾರ್ಡ್‌ನಲ್ಲಿ ನಮೂದಿಸಿರುವ ಮಾಹಿತಿಗಳನ್ನು ಓದುವಂತೆ ಮತ್ತು ತಾಯಿ ಕಾರ್ಡ್‌ಅನ್ನು ಸುರಕ್ಷಿತವಾಗಿಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಮಲತಾ, ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತು ಫಲಾನುಭವಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.