ಬ್ರೊಕಲಿ ಪ್ರತಿಯೊಬ್ಬರ ನೆಚ್ಚಿನ ತರಕಾರಿಯಲ್ಲದಿದ್ದರೂ ಆರೋಗ್ಯಕರವಂತೂ ಹೌದು. ಬ್ರೊಕೊಲಿ ಕಾಂಡವನ್ನು ಹೆಚ್ಚಿನವರು ಎಸೆಯುತ್ತಾರೆ. ಏಕೆಂದರೆ ಅದನ್ನು ಅಡುಗೆಯಲ್ಲಿ ಹೇಗೆ ಬಳಸಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ನಾವಿಂದು ಬ್ರೊಕಲಿ ಕಾಂಡದ ಸೂಪ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಬ್ರೊಕಲಿ ಕಾಂಡವನ್ನು ವೇಸ್ಟ್ ಎಂದು ತಿಳಿದು ಅದನ್ನು ಎಸೆಯದೇ ನೀವು ಕೂಡಾ ಸೂಪ್ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
ಆಲಿವ್ ಎಣ್ಣೆ – 1 ಟೀಸ್ಪೂನ್
ಹೆಚ್ಚಿದ ಈರುಳ್ಳಿ – ಅರ್ಧ
ಬೆಳ್ಳುಳ್ಳಿ – 2
ಹೆಚ್ಚಿಕೊಂಡ ಬ್ರೊಕಲಿ ಕಾಂಡ – 4-5 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ – ಸ್ವಾದಕ್ಕನುಸಾರ
ಚಿಕನ್/ತರಕಾರಿ ಸ್ಟಾಕ್ – 3 ಕಪ್
ಮಾಡುವ ವಿಧಾನ:
- ಮೊದಲಿಗೆ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಬ್ರೊಕಲಿ ಕಾಂಡಗಳನ್ನು ಸೇರಿಸಿ ಫ್ರೈ ಮಾಡಿ.
- ಅದಕ್ಕೆ ಉಪ್ಪು ಮತ್ತು ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ.
- ಇದನ್ನು ಸುಮಾರು 10 ನಿಮಿಷಗಳ ಕಾಲ ಆಗಾಗ ಬೆರೆಸುತ್ತಾ ಚೆನ್ನಾಗಿ ಬೇಯಿಸಿಕೊಳ್ಳಿ.
- ತರಕಾರಿಗಳು ಮೃದುವಾದ ನಂತರ ಅದಕ್ಕೆ ಚಿಕನ್ ಅಥವಾ ತರಕಾರಿ ಸ್ಟಾಕ್ ಸೇರಿಸಿ.
- ಸೂಪ್ ಚೆನ್ನಾಗಿ ಕುದಿದ ಬಳಿಕ ಉರಿಯನ್ನು ಆಫ್ ಮಾಡಿ, ಆರಲು ಬಿಡಿ.
- ಈಗ ಮಿಕ್ಸರ್ ಜಾರ್‌ಗೆ ಸೂಪ್ ಮಿಶ್ರಣ ಹಾಕಿ ನಯವಾಗಿ ರುಬ್ಬಿಕೊಳ್ಳಿ.
- ಬಳಿಕ ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಸೂಪ್ ತಣ್ಣಗಾಗಿದ್ದರೆ, ಮತ್ತೆ ಸ್ವಲ್ಪ ಬಿಸಿ ಮಾಡಿಕೊಳ್ಳಿ.
- ಇದೀಗ ಬ್ರೊಕಲಿ ಸೂಪ್ ಸವಿಯಲು ಸಿದ್ಧವಾಗಿದೆ.