ಮೈಸೂರು : ಕನ್ನಡ ನಮ್ಮ ತಾಯಿ ಭಾಷೆ. ಶಿಕ್ಷಣ ಮತ್ತು ಆಡಳಿತ ಭಾಷೆ ಸಹ. ಆದ್ಣದರಿಂದ, ನಮ್ಮ ಹೃದಯದ ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಲು, ಪರಸ್ಪರ ಪರಿಣಾಮಕಾರಿಯಾದ ಸಂವಹನ ಮಾಡಲು ತಾಯಿ ನುಡಿ ‘ಕನ್ನಡ ಭಾಷೆ’ಯಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಕನ್ನಡ ಭಾಷೆ ಉದ್ಯೋಗದ ಮತ್ತು ಅನ್ನದ ಭಾಷೆಯಾಗಿ ಸಹ ಬದುಕನ್ನು ಕಾಯುತ್ತದೆ. ಆದ್ದರಿಂದ, ನಾವು ಸಹ ಕನ್ನಡವ ಅಭಿಮಾನದಿಂದ ಕಾಯಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತಾಗಿ ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುವ ಹವ್ಯಾಸದಿಂದ ಮತ್ತು ಸಾಹಿತಿಗಳ ಒಡನಾಟದಿಂದ ಕನ್ನಡ ಪ್ರೀತಿ ವೃದ್ಧಿಯಾಗುತ್ತದೆ. ಪರಭಾಷೆಯ ಕುರಿತು ಮೋಹ ಸಲ್ಲದು. ಕನ್ನಡವೇ ನಿತ್ಯದ, ಸತ್ಯದ ಪಥವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮಾತನಾಡಿ ಶಾಲಾ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯನ್ನು ತಪ್ಪಾಗಿ ಓದುವ ಮತ್ತು ಬರೆಯುವ ಮನೋಭಾವ ಹೆಚ್ಚು. ಇಂತಹ ಅನಾದರ ಭಾವ ತೊರೆದು ನಮ್ಮ ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿತು ಸ್ಪಷ್ಟ ಉಚ್ಛಾರಣೆ, ಶುದ್ಧ ಬರಹ ಮಾಡುವ ಮೂಲಕ ಉಳಿಸುವ ಬೆಳೆಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕಿಯರಾದ ಪಿ.ಎಲ್. ಭಾಗ್ಯ, ಸತ್ಯವತಿ, ಕಲ್ಪನಾ, ರೂಹಿ ಅಬ್ಸಾ, ಪದವೀಧರ ಶಿಕ್ಷಕರಾದ ಸುನೀಲ್ ಕುಮಾರ್, ರಂಗಸ್ವಾಮಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕನ್ನಡ ಹಿರಿಮೆಯನ್ನು ಸಾರುವ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಅರ್ಥಪೂರ್ಣತೆ ತುಂಬಿದರು.