Monday, September 29, 2025
Google search engine

Homeರಾಜ್ಯಮಹಾಮಳೆ : ನಾಳೆ ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ: ತುರ್ತು ಪ್ಯಾಕೇಜ್ ಘೋಷಣೆಗೆ ಖಂಡ್ರೆ ಮನವಿ

ಮಹಾಮಳೆ : ನಾಳೆ ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ: ತುರ್ತು ಪ್ಯಾಕೇಜ್ ಘೋಷಣೆಗೆ ಖಂಡ್ರೆ ಮನವಿ

ಬೆಂಗಳೂರು : ಬೀದರ್ ನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾರೀ ಪ್ರಮಾಣದ ಬೆಳೆ, ಮನೆ ಹಾನಿಯ ಜೊತೆಗೆ ಮೂಲಸೌಕರ್ಯಕ್ಕೂ ಹಾನಿ ಆಗಿದ್ದು, ವೈಮಾನಿಕ ಸಮೀಕ್ಷೆ ನಡೆಸಿ, ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.

ಸಚಿವ ರಹೀಂಖಾನ್ ಜೊತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದ ಬಳಿಕ ಮಾತನಾಡಿದ ಈಶ್ವರ ಖಂಡ್ರೆ, ತಮ್ಮ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು 3 ದಿನಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ ಋತುಮಾನಗಳಲ್ಲಿ ಏರುಪೇರಾಗುತ್ತಿದ್ದು, ಇದರ ಪರಿಣಾಮ ಗಡಿ ಜಿಲ್ಲೆ ಬೀದರ್ ಮೇಲೂ ಆಗುತ್ತಿದೆ. ಹೆಚ್ಚಿನ ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಇಲ್ಲದ ನಮ್ಮ ಜಿಲ್ಲೆಯ ಶೇ.75ರಷ್ಟು ಜನರ ಬದುಕು ಕೃಷಿಯನ್ನೇ ಅವಲಂಬಿಸಿದ್ದು, ಈ ವರ್ಷ 4.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಆದರೆ, ಆಗಸ್ಟ್ ತಿಂಗಳಲ್ಲೇ ಸುರಿದ ಅನಿರೀಕ್ಷಿತ ಪ್ರಮಾಣದ ಮಳೆಯಿಂದ ಶೇ.25ರಷ್ಟು ಬೆಳೆ ನಷ್ಟವಾಗಿತ್ತು. ಈಗ ಸೆಪ್ಟೆಂಬರ್ ನಲ್ಲಿ ಮತ್ತೆ ವಿಪರೀತ ಮಳೆ ಸುರಿಯುತ್ತಿದ್ದು, ರಾಶಿಗೆ ಬಂದ ಹೆಸರು, ಉದ್ದು, ತೊಗರಿ, ಸೋಯಾ ಸೇರಿದಂತೆ ಎಲ್ಲ ಬೆಳೆ ಸಂಪೂರ್ಣ ಹಾನಿಯಾಗಿದೆ.

ಇದರಿಂದ ನಮ್ಮ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಈಶ್ವರ ಖಂಡ್ರೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಒಂದು ವಾರದ ಅವಧಿಯಲ್ಲಿ ಒಂದು ತಿಂಗಳ ಮಳೆ ಬೀಳುತ್ತಿರುವ ಪರಿಣಾಮ, ಹಲವು ಸೇತುವೆಗಳು ಕುಸಿದು ಸಂಪರ್ಕ ಕಡಿತವಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿ ಅನೇಕ ಗ್ರಾಮಗಳು ವಿದ್ಯುತ್ ಇಲ್ಲದೆ ಅಂಧಕಾರದಲ್ಲಿ ಮುಳುಗಿವೆ. ಭಾರೀ ಮಳೆಗೆ ಶಾಲಾ ಕೊಠಡಿ, ಅಂಗನವಾಡಿ ಕಟ್ಟಡ, ಆಸ್ಪತ್ರೆ, ಸರ್ಕಾರಿ ಕಚೇರಿಗಳೂ ಸೋರುವಂತಾಗಿದೆ.

ಪ್ರವಾಹದಿಂದಾಗಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದು, ಭೂಮಿ ಸವಳು ಜವಳಾಗಿದೆ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ತಾವು, ಬೀದರ್ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ತುರ್ತು ಪರಿಹಾರ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ವಿನಂತಿ ಮಾಡಿದ್ದಾಗಿ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೂ ತಿಳಿಸಿದರು.

ಪ್ರವಾಹದಿಂದಾಗಿ ಭೀಮಾ ತೀರದ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಬಗ್ಗೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕಲಬುರಗಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿರುವ ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಲಿದ್ದಾರೆ.

ಕಲಬುರಗಿ, ಬೀದರ್, ಯಾದಗಿರಿ ಹಾಗು ವಿಜಯಪುರ ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವರು. ಇದೆ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಅರಣ್ಯ ಸಚಿಚ ಈಶ್ವರ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೀದರ್ ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಹಾಗೂ ಕೈಗೊಂಡಿರುವ ಪರಿಹಾರ ಕಾರ್ಯಗಳನ್ನು ವಿವರಿಸಿದರು.

RELATED ARTICLES
- Advertisment -
Google search engine

Most Popular