ಬೆಂಗಳೂರು: ಪೂರ್ವ ಅರಬ್ಬಿ ಸಮುದ್ರ ತೀರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮುಂದಿನ ಆರು ದಿನ ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಹುತೇಕ ಮಳೆ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇಂದಿನಿಂದ ಅ 16 ರವರೆಗೆ ಮಳೆ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಈ ಬಗ್ಗೆ ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಪ್ರತಿಕ್ರಿಯಿಸಿದ್ದು, ಪೂರ್ವ ಅರಬ್ಬಿ ಸಮುದ್ರ, ಕರ್ನಾಟಕ, ಗೋವಾ, ಕರಾವಳಿ ತೀರದಲ್ಲಿ ತೀವ್ರವಾಗಿ ವಾಯುಭಾರ ಕುಸಿತ ಹಿನ್ನೆಲೆ ಕರ್ನಾಟಕದಲ್ಲಿ ಅಕ್ಟೋಬರ್ 11 ರಿಂದ 14 ರವರೆಗೆ ಸಾಧಾರಣ ಮಳೆ ಮತ್ತು 15 ಮತ್ತು 16 ರಂದು ವ್ಯಾಪಕ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ, ಹಾವೇರಿ, ಗದಗ, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಬಳ್ಳಾರಿ, ರಾಮನಗರದಲ್ಲಿ ಭಾರೀ ಮಳೆ ಸಾಧ್ಯತೆ ಇದೆ.
ದಕ್ಷಿಣ ಭಾಗದ ಕೆಲವು ಜಿಲ್ಲೆಗಳಲ್ಲಿ ಅಕ್ಟೊಬರ್ 12 ರಂದು ಭಾರೀ ಮಳೆ ಸಾಧ್ಯತೆ ಇದೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿನ ಚಾರ್ಮಾಡಿಘಾಟ್ ರಸ್ತೆಯಲ್ಲಿ ಮಳೆಯಿಂದ ಪ್ರವಾಹದ ಸನ್ನಿವೇಶ ಸೃಷ್ಟಿಯಾಗಿತ್ತು. ರಸ್ತೆಮೇಲೆ ಹೊಳೆಯಂತೆ ನೀರು ಹರಿಯುತ್ತಿದ್ದ ದೃಶ್ಯ ಬೆಚ್ಚಿಬೀಳಿಸುವಂತಿತ್ತು. ಸಾಲು ಸಾಲಾಗಿ ಗುಡ್ಡಗಳು ಕುಸಿದಿದ್ದವು. ಟ್ರಾಫಿಕ್ ಜಾಮ್ ಉಂಟಾಗಿ ನೂರಾರು ವಾಹನಗಳು ಸಾಲುಗಟ್ಟಿನಿಲ್ಲುವಂತಾಗಿತ್ತು.