ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದ ಮೊದಲ ದಿನವೇ ಹೆಚ್ಚಿನ ದಟ್ಟಣೆ ಕಂಡುಬಂದಿದ್ದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್ ಅವರಿಗೆ ಅವರು ಪತ್ರ ಬರೆದಿದ್ದಾರೆ. ಸದ್ಯ ಹಸಿರು ಮಾರ್ಗದಲ್ಲಿ ಪ್ರತಿ 4-8 ನಿಮಿಷಕ್ಕೆ ರೈಲು ಸಂಚರಿಸುತ್ತಿದೆ, ಆದರೆ ಹಳದಿ ಮಾರ್ಗದಲ್ಲಿ ಕೇವಲ ಪ್ರತಿ 25 ನಿಮಿಷಕ್ಕೊಮ್ಮೆ ರೈಲು ಸಂಚರಿಸುತ್ತಿರುವುದು, ಆರ್.ವಿ. ರಸ್ತೆ ಇಂಟರ್‌ಚೇಂಜ್ ನಿಲ್ದಾಣದಲ್ಲಿ ದಟ್ಟಣೆಗೆ ಕಾರಣವಾಗಿದೆ.
ಈ ದಟ್ಟಣೆಯಿಂದ ಸಂಭವಿಸಬಹುದಾದ ಅಪಾಯ ತಡೆಗಟ್ಟಲು ತಕ್ಷಣವೇ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಅಥವಾ ಬ್ಯಾರಿಕೇಡ್‌ಗಳನ್ನು ಅಳವಡಿಸುವಂತೆ ಅವರು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ರೈಲುಗಳ ಸಂಖ್ಯೆ ಹೆಚ್ಚಾಗಲಿದೆ . ಅದುವರೆಗೆ ಜನದಟ್ಟಣೆ ನಿಯಂತ್ರಣಕ್ಕೆ ತಕ್ಷಣ ಕ್ರಮ ಅನಿವಾರ್ಯ ಎಂದು ಅವರು ಮನವಿ ಮಾಡಿದ್ದಾರೆ.