ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತು ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ತೀವ್ರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಹಣ ಸಮರ್ಪಕವಾಗಿ ತಲುಪಿಲ್ಲ ಎಂದು ಬಿಜೆಪಿ ಆರೋಪಿಸಿದ್ದು, ಈ ಕುರಿತು ವಿಧಾನಸಭೆಯಲ್ಲಿ ಉತ್ತರ ನೀಡುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸದನದಲ್ಲಿಯೇ ಆರೋಪಿಸಿದ್ದಾರೆ.
ಇನ್ನೂ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂದು ದಾಖಲೆಗಳ ಸಮೇತ ಆರೋಪಿಸಿದ್ದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿದ್ದರು. ಈ ಎರಡು ತಿಂಗಳುಗಳ ಅವಧಿಯ 5,500 ಕೋಟಿಗೂ ಅಧಿಕ ಅನುದಾನ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದರು.
ಸರ್ಕಾರದ ಕಡೆಯಿಂದ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು ಒಂದಷ್ಟು ತಾಂತ್ರಿಕ ದೋಷಗಳು ಇರುವುದನ್ನು ಒಪ್ಪಿಕೊಂಡಿದ್ದು, ಅವುಗಳನ್ನು ಆದಷ್ಟು ಬೇಗ ಸರಿಪಡಿಸುವುದಾಗಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಜಿಎಸ್ಟಿ ಪಾಲು ಲಭ್ಯವಾಗದಿರುವುದರಿಂದ ಹಣದ ಕೊರತೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಚಿವೆ ಹೆಬ್ಬಾಳ್ಕರ್ ಗೃಹ ಲಕ್ಷ್ಮೀ ಹಣ ಬಂದಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡಿದ್ದೇವೆ. ಈ ಬಗ್ಗೆ ಇಂದು ಸದನದಲ್ಲಿ ಉತ್ತರ ಕೊಡ್ತಿನಿ. ಕಾಣೆ ಆಗೋಕೆ, ಹೇಳಿದ ಮಾತು ತಪ್ಪಲು ಇದು ಬಿಜೆಪಿ ಅಲ್ಲ ಕಾಂಗ್ರೆಸ್ ಸರ್ಕಾರ ಎಂದು ತಿರುಗೇಟು ನೀಡಿದರು.
ಇನ್ನೂ ಈ ಬಗ್ಗೆ ತಪ್ಪೋಪ್ಪಿಕೊಂಡ ಅವರು ಗೃಹಲಕ್ಷ್ಮಿ ಹಣ 2 ತಿಂಗಳ ಹಣ ಬಾಕಿಯಿದೆ. ನನ್ನ ಮಾತಿನಿಂದ ತಪ್ಪಾಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ.
2024-2025ನೇ ಆರ್ಥಿಕ ವರ್ಷದಲ್ಲಿ 2 ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡದೇ ಗೋಲ್ ಮಾಲ್ ಆಗಿರುವ ಅನುಮಾನ ಎದ್ದಿದ್ದು. ಹಣ ಬಿಡುಗಡೆ ಆಗದೇ ಇರೋದಕ್ಕೆ ಆರ್ಥಿಕ ಇಲಾಖೆ ಕಾರಣ ಅಂತ ಆರ್ಥಿಕ ಇಲಾಖೆ ಮೇಲೆ ಗೂಬೆ ಕೂರಿಸುತ್ತಾ ಇತ್ತು. 2 ಇಲಾಖೆ ತಿಕ್ಕಾಟದಿಂದ ಹಣ ಬಾಕಿ ಇದೆ ಅನ್ನೋದರ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲಿಗೆ, ಒಟ್ಟು 23 ಕಂತುಗಳ 46 ಸಾವಿರ ರೂಪಾಯಿಗಳನ್ನು 1.26 ಕೋಟಿ ಮಹಿಳೆಯರ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಿದ್ದೇವೆ. ನಾನು ಸದನದಲ್ಲಿ ಹೇಳಿದ ಹೇಳಿಕೆಗೆ ಈಗಲೂ ಬದ್ಧ. ಕಳೆದ ಆಗಸ್ಟ್ ತಿಂಗಳವರೆಗಿನ ಹಣ ಜಮೆ ಆಗಿದೆ ಅಂತ ಹೇಳಿದ್ದರು.
ಈ ಬಗ್ಗೆ ಸದನದಲ್ಲೂ ಉತ್ತರ ನೀಡಿದ ಅವರು ರಾಜ್ಯದಲ್ಲಿ ಈ ಯೋಜನೆ ಮೊದಲು ಬಂತು. ಇದನ್ನು ಅತ್ಯಂತ ಭಕ್ತಿ ಭಾವದಿಂದ ಈ ಪುಣ್ಯದ ಕೆಲಸ ಮಾಡ್ತಿದೀವಿ. ಇದು ದೇಶಕ್ಕೆ ಮಾದರಿ ಆಗಿದೆ. ಈವರೆಗೆ 23 ಕಂತುಗಳ ಹಣವನ್ನ ಹಾಕಲಾಗಿದೆ. ಆದರೆ ಪದೇ ಪದೇ ಫೆಬ್ರವರಿ ಮಾರ್ಚ್‌ದು ಕೇಳ್ತಿದ್ರು, ನನ್ನ ಪ್ರಕಾರ ಕೊಟ್ಟಿದ್ದೀವಿ ಅಂದುಕೊಂಡಿದ್ದೆ. ಆದರೆ ಮತ್ತೆ ಪರಿಶೀಲನೆ ಮಾಡಿದಾಗ 2 ತಿಂಗಳ ಹಣ ಬಾಕಿ ಇರೋದು ಕಂಡುಬಂದಿದೆ. ಯಾಕೆ ವ್ಯತ್ಯಯ ಆಗಿದೆ ಅನ್ನೋದನ್ನ ಪರಿಶೀಲನೆ ಮಾಡುತ್ತೀವಿ ನನ್ನ ಮಾತಿನಿಂದ ತಪ್ಪಾಗಿದ್ದರೇ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.



