ಪ್ರಯಾಗ್ ರಾಜ್: ಮಹಾಕುಂಭಕ್ಕೆ ಆಗಮಿಸುವ ಭಕ್ತರಿಗೆ ಶುಭ ಸುದ್ದಿಯೊಂದು ನೀಡಿದೆ ಅದರಂತೆ ಭಕ್ತರು ಇನ್ನು ಪ್ರಯಾಗ್ ರಾಜ್ ನಿಂದ ತ್ರಿವೇಣಿ ಸಂಗಮದ ವರೆಗೆ ನಡೆದುಕೊಂಡು ಹೋಗಬೇಕಾಗಿಲ್ಲ ಬದಲಾಗಿ ಭಕ್ತರಿಗೆ ಅನುಕೂಲವಾಗಲಿ ಎಂದು ಹೆಲಿಕಾಪ್ಟರ್ ವ್ಯವಸ್ಥೆಯನ್ನು ಆರಂಭಿಸಿದೆ, ಇದರಿಂದ ಭಕ್ತರು ಪ್ರಯಾಗ್ ರಾಜ್ ನಿಂದ ತ್ರಿವೇಣಿ ಸಂಗಮದ ವರೆಗೆ ನಡೆದುಕೊಂಡು ಹೋಗುವ ಪ್ರಮೇಯ ತಪ್ಪಲಿದೆ.
ಹೌದು ಮಹಾ ಕುಂಭ ಭಕ್ತರು ಈಗ ಹೆಲಿಕಾಪ್ಟರ್ ಮೂಲಕ ಪ್ರಯಾಗರಾಜ್ ವಿಮಾನ ನಿಲ್ದಾಣದಿಂದ ನೇರವಾಗಿ ತ್ರಿವೇಣಿ ಸಂಗಮವನ್ನು ತಲುಪಬಹುದು. ವಾಸ್ತವವಾಗಿ, ಉತ್ತರ ಪ್ರದೇಶ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮತ್ತು ಫ್ಲೈ ಓಲಾ ಮೂಲಕ ಹೆಲಿಕಾಪ್ಟರ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಸಾಗಿದರೆ ಹೆಚ್ಚು ನಡೆಯುವ ಅವಶ್ಯಕತೆ ಇರುವುದಿಲ್ಲ.
ಈ ಹೆಲಿಕಾಪ್ಟರ್ ಪ್ರಯಾಗರಾಜ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುತ್ತದೆ ಮತ್ತು ತ್ರಿವೇಣಿ ಸಂಗಮ ಬಳಿಯ ಬೋಟ್ ಕ್ಲಬ್‌ನಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್‌ನಲ್ಲಿ ನಿಮ್ಮನ್ನು ನೇರವಾಗಿ ಇಳಿಸುತ್ತದೆ. ಈ ಸಮಯದಲ್ಲಿ ನೀವು ಆಕಾಶದಿಂದ ಮಹಾಕುಂಭದ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಹೆಲಿಪ್ಯಾಡ್‌ನಿಂದ ಇಳಿದ ನಂತರ, ಬೋಟ್ ಕ್ಲಬ್‌ನಿಂದ ನಿಮಗೆ ದೋಣಿಯನ್ನು ಒದಗಿಸಲಾಗುತ್ತದೆ, ಅದು ನಿಮ್ಮನ್ನು ನೇರವಾಗಿ ಸಂಗಮಕ್ಕೆ ಕರೆದೊಯ್ಯುತ್ತದೆ. ಸಂಗಮದಲ್ಲಿ ಸ್ನಾನ ಮಾಡಿದ ನಂತರ, ಅದೇ ದೋಣಿ ನಿಮ್ಮನ್ನು ಹೆಲಿಪ್ಯಾಡ್‌ಗೆ ಹಿಂತಿರುಗಿಸುತ್ತದೆ ಮತ್ತು ಹೆಲಿಕಾಪ್ಟರ್ ನಿಮ್ಮನ್ನು ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಕರೆತರಲಿದೆ.
ಎಷ್ಟು ವೆಚ್ಚವಾಗುತ್ತದೆ?
ಮಾಹಿತಿ ಪ್ರಕಾರ, ಈ ಸಂಪೂರ್ಣ ಪ್ಯಾಕೇಜ್‌ಗೆ ಒಬ್ಬರಿಗೆ 35 ಸಾವಿರ ರೂ. ನಿಗದಿಪಡಿಸಲಾಗಿದ್ದು, ವಿಶೇಷವಾಗಿ ವೃದ್ಧರು ಮತ್ತು ಅಂಗವಿಕಲರಿಗೆ ಸಂಗಮ ತಲುಪಲು ಇದು ಉತ್ತಮ ಮತ್ತು ಸುಲಭ ಮಾರ್ಗವಾಗಿದೆ.
ಈ ಕುರಿತು ಮಾಹಿತಿ ನೀಡಿದ ಫ್ಲೈ ಓಲಾ ಗ್ರೂಪ್ ಸಿಇಒ ಆರ್‌ಎಸ್ ಸೆಹಗಲ್ ಪ್ರಯಾಗ್ ರಾಜ್ ನಿಂದ ಹೆಲಿಕಾಪ್ಟರ್ ಸೇವೆಗಳು ನಿರಂತರವಾಗಿ ಇರಲಿದ್ದು ಭಕ್ತರು ಹೋಟೆಲ್ ಗಳಲ್ಲಿ ತಂಗುವ ಬದಲು ವಿಮಾನ ನಿಲ್ದಾಣದಿಂದ ನೇರವಾಗಿ ತ್ರಿವೇಣಿ ಸಂಗಮಕ್ಕೆ ತೆರಳಿ ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಕೇವಲ 4-5 ಗಂಟೆಗಳಲ್ಲಿ ವಾಪಸ್ಸಾಗಬಹುದು ಎಂದು ಹೇಳಿದ್ದಾರೆ.
ಜನವರಿ 13 ರಿಂದ ಪ್ರಾರಂಭವಾದ ಮಹಾಕುಂಭಕ್ಕೆ ಈಗಾಗಲೇ ಕೋಟ್ಯಾಂತರ ಮಂದಿ ಭಕ್ತರು ಬಂದು ಪವಿತ್ರ ಸ್ನಾನ ಮಾಡಿ ತೆರಳಿದ್ದಾರೆ ಈಗಲೂ ದಿನಕ್ಕೆ ಲಕ್ಷಾಂತರ ಮಂದಿ ಇಲ್ಲಿನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ ಅಲ್ಲದೆ ಇತ್ತೀಚಿಗೆ ನಡೆದ ಕಾಲ್ತುಳಿತ ಘಟನೆ ನಡೆದ ಬಳಿಕ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು ಬರುವವರು ಕಿಲೋಮೀಟರ್ ದೂರದಿಂದಲೇ ಪಾದಯಾತ್ರೆ ಮೂಲಕ ಸಂಗಮಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.