Saturday, April 19, 2025
Google search engine

Homeಸ್ಥಳೀಯಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಸಹಕರಿಸಿ : ಡಾ. ಶಶಿಧರ್

ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಸಹಕರಿಸಿ : ಡಾ. ಶಶಿಧರ್

ರಾಮನಗರ: ಸೊಳ್ಳೆಗಳಿಂದ ಪ್ರಮುಖವಾಗಿ ಮಲೇರಿಯ, ಡೆಂಗಿ, ಚಿಕುನ್ ಗುನ್ಯ, ಮೆದುಳುಜ್ವರ ರೋಗಗಳು ಹರಡುತ್ತವೆ. ಸೋಂಕಿತ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಮಲೇರಿಯ ಸೋಂಕು ತಗುಲಿದಾಗ ಚಳಿ, ಜ್ವರ, ತಲೆನೋವು, ನಡುಕ, ವಾಂತಿ, ವಾಕರಿಕೆ, ಮೈ-ಕೈನೋವು, ಡೆಂಗಿಯಲ್ಲಿ ಮೈಮೇಲೆ ಕೆಂಪು ಗಂದೆಗಳು, ಕಣ್ಣಿನ ಹಿಂಬಾಗ ನೋವು, ಸೋಂಕು ತೀರ್ವತರವಾದಾಗ ವಸಡು, ಮೂಗು, ಕಿವಿಗಳಲ್ಲಿ ರಕ್ತಸ್ರಾವ ಡಾಂಬರು ಬಣ್ಣದ  ಮಲವಿಸರ್ಜನೆ, ಚಿಕುನ್‌ಗುನ್ಯದಲ್ಲಿ  ಜ್ವರ, ಸಣ್ಣ-ಸಣ್ಣ ಕೀಲುಗಳ ನೋವು, ಮೆದುಳು ಜ್ವರದಲ್ಲಿ ತೀವ್ರತರ ಜ್ವರ, ಜ್ಞಾನ ತಪ್ಪುವುದು, ಆನೇಕಾಲು ರೋಗದಲ್ಲಿ ಕಾಲುಗಳು ಮತ್ತು ವೃಷಣಭಾಗದ ಊತ ಇಂತಹ ಲಕ್ಷಣಗಳು ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಬೇಕು ಒಂದುವೇಳೆ ಪ್ರಕರಣಗಳು ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದು ಗುಣಮುಖರಾಗುವ ಜೊತೆಗೆ ಸೊಳ್ಳೆಕಡಿತದಿಂದ ರಕ್ಷಣೆ ಪಡೆದುಕೊಳ್ಳಬೇಕು ಆದ್ದರಿಂದ ತಾವೆಲ್ಲರೂ ಜಾಗೃತರಾಗಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಸಹಕರಿಸುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ. ಶಶಿಧರ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ರಾಮನಗರ ಟೌನಿನ ಅರ್ಚಕರಹಳ್ಳಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇನ್‌ಡೆಕ್ಷನ್ ಕಾರ್ಯಕ್ರಮದಡಿಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಮತ್ತು ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಬೇಕಾದರೆ ಪರಿಸರ ವಿಧಾನದಲ್ಲಿ ನೀರು ಶೇಕರಣೆ ಪರಿಕರಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಮಣ್ಣಿನ ಮಡಿಕೆ ಇವುಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸಬೇಕು ಹಾಗೂ ಈಗಾಗಲೆ ಅಕಾಲಿಕ ಮಳೆ ಪ್ರಾರಂಭವಾಗಿದ್ದು ಘನತ್ಯಾಜ್ಯಗಳಾದ ಟೈರು, ಎಳನೀರ ಚಿಪ್ಪು, ಒಡೆದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಅನುಪಯುಕ್ತ ಒರಳುಕಲ್ಲು ಇವುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿರುತ್ತದೆ. ಆದ್ದರಿಂದ ನೀರು ನಿಲ್ಲದಂತೆ ಕ್ರಮವಹಿಸಿ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗೂ ಸ್ವಯಂ ರಕ್ಷಣ ವಿಧಾನದಲ್ಲಿ ಮೈತುಂಬ ಬಟ್ಟೆ ಧರಿಸುವುದು, ಸಂಜೆ ವೇಳೆ ಬೇವಿನ ಸೊಪ್ಪು ಅಥವಾ ಸಾಂಮ್ರಾಣಿ ಧೂಪ ಹಾಕುವುದು ಮತ್ತು ಕಿಟಕಿ ಬಾಗಿಲುಗಳನ್ನು ಮುಚ್ಚುವುದು, ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು ಒಟ್ಟಾರೆ ಸೊಳ್ಳೆ ಉತ್ಪತ್ತಿ ನಿಯಂತ್ರಿಸುವುದರ ಜೊತೆಗೆ ಸೊಳ್ಳೆ ಕಡಿತದಿಂದ ರಕ್ಷಣೆ ಪಡೆದಾಗ ಮಾತ್ರ ಈ ರೋಗಗಳು ಹರಡದಂತೆ ನಿಯಂತ್ರಿಸಲು ಸಾಧ್ಯವೆಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿನಯ್ ಕುಮಾರ್ ಅವರು ಮಾತನಾಡಿ, ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಲು ತಾವೆಲ್ಲರೂ ವೈಯಕ್ತಿಕ, ಪರಿಸರ, ವಿಧಾನಗಳನ್ನು ಅನುಸರಿಸುವುದರ ಜೊತೆಗೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಲಾರ್ವ ಸಮೀಕ್ಷೆ ಮಾಡುವ ಸಂದರ್ಭಗಳಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಬಾಲರಾಜು, ಜಿಲ್ಲಾ ಲ್ಯಾಬ್ ನೋಡಲ್ ಅಧಿಕಾರಿ ಶಿವಪ್ರಕಾಶ್, ಪ್ರಾಧ್ಯಪಕರಾದ ಡಾ. ಪರಮೇಶ್ವರಪ್ಪ, ಶಾರದ, ರಿಜಿಸ್ಟರ್ ನಾಗರಾಜು, ತರಬೇತಿ ಸಂಯೋಜನಾಧಿಕಾರಿ ಉಮೇಶ್, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular