ರೂಲ್ಸ್ ಉಲ್ಲಂಘಿಸಿದ್ರೆ ದಂಡ ಫಿಕ್ಸ್
ಮೈಸೂರು: ದಿನೇ ದಿನೇ ಹೆಚ್ಚಾಗುತ್ತಿರುವ ಪ್ರವಾಸಿಗರಿಂದ, ರಾಜ್ಯ ಅಲ್ಲದೇ ಹೊರ ರಾಜ್ಯ, ದೇಶಗಳಿಂದಲೂ ದೇವರ ದರ್ಶನಕ್ಕಾಗಿ ನಿತ್ಯ ಸಾವಿರಾರು ಭಕ್ತರು ಮೈಸೂರಿನ ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದು ಅವರು ತಿಂದು ಬಿಸಾಡುವ ತಿಂಡಿ- ಪಟ್ಟಣಗಳು, ಜ್ಯೂಸ್ ಬಾಟಲಿಗಳು, ನೀರು ,ರಸ್ತೆ ಇಕ್ಕೆಲಗಳಲ್ಲಿ ಬಿದ್ದು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ. ಧಾರ್ಮಿಕ ಕೇಂದ್ರ ಎನ್ನುವ ಭಾವನೆಯು ಇಲ್ಲದಂತೆ ಎಲ್ಲೆಂದರಲ್ಲಿ ಕಸದ ರಾಶಿಯನ್ನೇ ಹಾಕಲಾಗುತ್ತಿದೆ .ಮೀಸಲು ಅರಣ್ಯ ಪ್ರದೇಶವಾಗಿರುವ ಬೆಟ್ಟ ಈಗ ಕಸದ ಗುಡ್ಡೆಯಾಗಿ ಮಾರ್ಪಡುತ್ತಿರುವುದು ದುರಂತವೇ ಸರಿ. ಇದರಿಂದ ಎಚ್ಚೆತ್ತುಕೊಂಡಿರುವ ಮೈಸೂರು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಮುಂದಾಗಿದ್ದು, ಚಾಮುಂಡಿ ಬೆಟ್ಟವನ್ನು ಕಸ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ ಕೈಗೊಳ್ಳುತ್ತಿದ್ದಾರೆ. ಅದಕ್ಕಾಗಿ ಕೆಲವು ನಿಯಮಗಳನ್ನು ಜಾರಿಗೆ ತರುತ್ತಿದ್ದು, ನಿಯಮಗಳು ಉಲ್ಲಂಘನೆ ಆದರೆ ದಂಡ ಕಟ್ಟ ಬೇಕಾಗಿರುವುದು ಬಹುತೇಕ ಖಚಿತ.
ಇನ್ನು ಚಾಮುಂಡಿಬೆಟ್ಟದ ಅಂಗಡಿಯವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮೊದಲ ಬಾರಿಗೆ ತ್ಯಾಜ್ಯ ಬಿಸಾಡಿದರೆ 2,500 ದಂಡ, ಎರಡನೇ ಬಾರಿಗೆ 5 ಸಾವಿರ ಹಾಗೂ ಮೂರನೇ ಬಾರಿಗೆ 10 ಸಾವಿರ ಹಾಗೂ ಲೈಸನ್ಸ್ ರದ್ದು. ಪ್ಲಾಸ್ಟಿಕ್ ಬಿಸಾಕಿದರೆ 500 ರೂ ದಂಡ ವಿಧಿಸಲಾಗುತ್ತದೆ. ಮದ್ಯ ಹಾನಿಕಾರಕ ವಸ್ತು ಸಾಗಿಸಿದರೆ 5 ಸಾವಿರ ರೂ. ದಂಡ, ಕಾಡು ಪ್ರಾಣಿಗಳಿಗೆ ಆಹಾರ ನೀಡಿದರೆ 1 ಸಾವಿರ ರೂ. ದಂಡ, ನಿರ್ಬಂಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ 1 ಸಾವಿರ ದಂಡ ವಿಧಿಸಲು ಪ್ಲಾನ್ ಮಾಡಲಾಗಿದ್ದು, ಸೆಪ್ಟೆಂಬರ್ 1 ರಿಂದ ಇದು ಜಾರಿಯಾಗಲಿದೆ ಎಂದು ಮೈಸೂರು ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶಿಸಿದ್ದಾರೆ.