ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ನೀಡುತ್ತಿದ್ದ ಮೊಟ್ಟೆ, ಶೇಂಗಾಚಿಕ್ಕಿ ಮತ್ತು ಬಾಳೆಹಣ್ಣನ್ನು ಇನ್ನು ವಾರದಲ್ಲಿ ಎರಡು ದಿನ ವಿತರಣೆ ಮಾಡುವುದಾಗಿ ಘೋಷಿಸಿರುವ ರಾಜ್ಯ ಸರ್ಕಾರ, ಈ ಯೋಜನೆಯನ್ನು 9 ಮತ್ತು 10ನೇ ತರಗತಿವರೆಗೂ ವಿಸ್ತರಿಸುವುದಾಗಿ ಪ್ರಕಟಿಸಿದೆ.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈವರೆಗೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 8ನೇ ತರಗತಿವರೆಗೂ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಮೊಟ್ಟೆ , ಶೇಂಗಾಚಿಕ್ಕಿ ಹಾಗೂ ಬಾಳೆಹಣ್ಣನ್ನು ವಿತರಿಸಲಾಗುತ್ತಿತ್ತು.
ಇನ್ನು ಮುಂದೆ ವಾರದಲ್ಲಿ ಇದನ್ನು ಎರಡು ದಿನ ವಿತರಣೆ ಮಾಡಲಾಗುವುದು. ಇದರಿಂದ ವಿದ್ಯಾರ್ಥಿಗಳ ಮಾನಸಿಕ ಸಮತೋಲನ ಉಂಟಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಈ ಯೋಜನೆಯನ್ನು 9 ಮತ್ತು 10ನೇ ತರಗತಿಯ ವ್ಯಾಸಂಗ ಮಾಡುತ್ತಿರುವ 60 ಲಕ್ಷ ಮಕ್ಕಳಿಗೆ 280 ಕೋಟಿ ಅನುದಾನವನ್ನು ಮೀಸಲಿಡುವುದಾಗಿ ತಿಳಿಸಿದ್ದಾರೆ.
ಮಕ್ಕಳಲ್ಲಿ ಉಂಟಾಗುವ ಕಲಿಕಾ ನ್ಯೂನತೆಯನ್ನು ನಿವಾರಿಸಲು ಸುಮಾರು 33 ಲಕ್ಷ ವಿದ್ಯಾರ್ಥಿಗಳಿಗೆ 80 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮರುಸಿಂಚನ ಎಂಬ ಯೋಜನೆಯಡಿ ಹಿಂದುಳಿದ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರೌಢ ಹಂತದ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ವಿಶೇಷ ತರಬೇತಿಯನ್ನು ನೀಡಲಾಗುವುದು.
ಶಾಲಾ ಶಿಕ್ಷಣ ಇಲಾಖೆಯಲ್ಲಿನ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸುವ ಸ್ಯಾಟ್ ತಂತ್ರಾಂಶವನ್ನು 2.0 ಎಂದು ಉನ್ನತೀಕರಿಸಲಾಗುವುದು. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮಾಧ್ಯಮಿಕ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಇನೋವೇಷನ್ ಲ್ಯಾಬ್‍ಗಳ ಸ್ಥಾಪನೆ, ಇದಕ್ಕಾಗಿ ರಾಜ್ಯದ ನಾಲ್ಕು ಕಂದಾಯಗಳಲ್ಲಿ ವಿಭಾಗಗಳಲ್ಲಿ 2 ಕೋಟಿ ರೂ. ಅನುದಾನವನ್ನು ಮೀಸಲಿಡುವುದಾಗಿ ತಿಳಿಸಿದರು.
ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಅವಯಲ್ಲಿ 50 ಲಕ್ಷ ಸಸಿ ನೆಡುವ ಸಸ್ಯ ಶಾಮಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಲ್ಲದೆ ಸಾಹಿತಿಗಳು ಮತ್ತು ಪ್ರಕಾಶಕರ ಬೇಡಿಕೆಗಳಿಗೆ ಸ್ಪಂದಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಉತ್ತಮ ಪುಸ್ತಕಗಳನ್ನು ಖರೀದಿಸಲು 10 ಕೋಟಿ ಅನುದಾನವನ್ನು ನೀಡುವುದಾಗಿ ತಿಳಿಸಿದ್ದಾರೆ.