ಚಾಮರಾಜನಗರ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತಾಲೂಕು ಆಡಳಿತ ಶಾಕ್ ನೀಡಿದ್ದು,ಇನ್ಮುಂದೆ ಭಕ್ತಾದಿಗಳಿಗೆ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಈ ಮೊದಲು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವರೆಗೆ ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಆದರೆ ಇತ್ತೀಚೆಗೆ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವುದರಿಂದ ಜೊತೆಗೆ ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಸಂಜೆ ಸಮಯದಲ್ಲಿ ಕಾಡಾನೆಯ ಬಳಿ ತೆರಳಿ ಸೆಲ್ಪಿ ತೆಗೆದುಕೊಳ್ಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ರೀತಿಯಲ್ಲಿ ಹರಿದಾಡುತ್ತಿರುವುದು ಕಂಡು ಬಂದಿರುವುದರಿಂದ ಮುಂಜಾಗ್ರತ ಕ್ರಮವಾಗಿ ಕಾಡಾನೆಯಿಂದ ಪ್ರವಾಸಿಗರಿಗೆ ತೊಂದರೆ ಉಂಟಾಗದಂತೆ ತಡೆಯಲು ಬಂಡೀಪುರ ಸಹಾಯಕ ಅರಣ್ಯ ಅಧಿಕಾರಿಗಳ ಕೋರಿಕೆಯ ಮೇರೆಗೆ ತಹಶೀಲ್ದಾರ್ ಟಿ .ರಮೇಶ್ ಬಾಬು ಮಧ್ಯಾಹ್ನ 3:00 ಬಳಿಕ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಬೆಳಗ್ಗೆ 9 ಗಂಟೆಯಿಂದ ಸಂಜೆ 3ರವರೆಗೆ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. 3 ಗಂಟೆಗೆ ದೇವಸ್ಥಾನದಿಂದ ಹೊರಡುವ ಬಸ್‌ನಲ್ಲಿ ಭಕ್ತಾದಿಗಳು ಹಾಗೂ 4-30 ಗಂಟೆಗೆ ಹೊರಡುವ ಬಸ್ಸಿನಲ್ಲಿ ದೇವಸ್ಥಾನದ ಸಿಬ್ಬಂದಿಗಳು ವಾಪಸ್ ತೆರಳಲು ಸೂಚನೆ ನೀಡಿದ್ದಾರೆ. ಜತೆಗೆ ಭಕ್ತರಿಗೆ ನೀಡುವ ಪ್ರಸಾದದ ವಾಸನೆಯಿಂದ ಕಾಡಾನೆಯು ದೇವಸ್ಥಾನದ ಬಳಿ ಬರುವ ಸಂಭವವಿರುವುದರಿಂದ ಪ್ರಸಾದ ನೀಡಲು ಅರಣ್ಯದ ಹೊರಗಿನ ಬೆಟ್ಟದ ತಪ್ಪಲಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅರ್ಚಕರಿಗೆ ಸೂಚನೆ ನೀಡಿದ್ದಾರೆ.
ಹಂಗಳ ಹೋಬಳಿ ವ್ಯಾಪ್ತಿಯಲ್ಲಿರುವ ಇಬ್ಬರು ಅಧಿಕಾರಿಗಳನ್ನು ಪ್ರತಿ ಶನಿವಾರ ಮತ್ತು ಭಾನುವಾರ ಭಕ್ತಾದಿಗಳನ್ನು ನಿಯಂತ್ರಿಸಲು ನಿಯೋಜನೆ ಮಾಡುವಂತೆ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.