ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ. ರಾಜ್ಯದಲ್ಲಿ ಈಗಾಗಲೇ 13,754 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಕೇವಲ 51 ಹಾಟ್ ಸ್ಪಾಟ್ ಇದೆ ಎಂದು ಬಿಬಿಎಂಪಿ ಹೇಳುತ್ತಿದೆ. ಇನ್ನು ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಹೀಗಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗೆ ಕ್ರಮ ಕೈಗೊಳ್ಳಬೇಕು.
ಸೊಳ್ಳೆ ಸಂತಾನೋತ್ಪತ್ತಿ ಪರಿಸರ ಸೃಷ್ಟಿಸಿದವರಿಗೆ ದಂಡ
ಸೊಳ್ಳೆ ಸಂತಾನೋತ್ಪತ್ತಿ ಪರಿಸರ ಸೃಷ್ಟಿಸಿದವರಿಗೆ ದಂಡ ವಿಧಿಸಬೇಕು. ಜೊತೆಗೆ ಸೊಳ್ಳೆ ಹೆಚ್ಚದಂತೆ ತಡೆಯಲು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಬೇಕು. ಏರಿಯಾವಾರು, ವಾರ್ಡ್ ವಾರು ಸೊಳ್ಳೆ ಸಂತಾನೋತ್ಪತ್ತಿ ಪತ್ತೆ ಹಚ್ಚಬೇಕು. ಕಸದ ಸಮಸ್ಯೆ ಕೂಡ ಡೆಂಘೀ ಇನ್ನಿತರ ವೈರಲ್ ರೋಗಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಕಸದ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮದ ಬಗ್ಗೆ ಆಗಸ್ಟ್ 28 ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಇನ್ನು ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಇದುವರೆಗೂ ವಿವಿಧ ಜಿಲ್ಲೆಗಳಲ್ಲಿ 10 ಜನ ಡೆಂಗ್ಯೂವಿಗೆ ಬಲಿಯಾಗಿದ್ದಾರೆ. ಜೊತೆಗೆ ಪ್ರತಿನಿತ್ಯ 300ರ ಸನಿಹಕ್ಕೆ ಕೇಸ್ಗಳು ದಾಖಲಾಗುತ್ತಿವೆ. ಇನ್ನೂ ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಮುಂಜಾಗ್ರತೆಯನ್ನು ವಹಿಸುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಮೀಸಲು ಇಟ್ಟಿದೆ. ಜೊತೆಗೆ ಮನೆ ಮನೆಗೆ ತೆರಳಿ ಸರ್ವೆ ಮಾಡಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.