ಬೆಂಗಳೂರು: ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜು ನಿಲ್ಲಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಹಿನ್ನೆಲೆಯಲ್ಲಿ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ, ರಾಜ್ಯವಾರು ಎಲ್‌ಪಿಜಿ ಹಂಚಿಕೆ ಪ್ರಕ್ರಿಯೆ, ಮಾರ್ಚ್ ತಿಂಗಳಲ್ಲಿ ಕರ್ನಾಟಕದ ಪಾಲು ಹಾಗೂ ರಾಜ್ಯದಲ್ಲಿನ ಪ್ರಸ್ತುತ ಸಿಲಿಂಡರ್ ದಾಸ್ತಾನು ಕುರಿತು ಸಂಪೂರ್ಣ ವಿವರ ನೀಡುವಂತೆ ಸೂಚಿಸಿದೆ.
ಬೆಂಗಳೂರು ಹೋಟೆಲ್‌ಗಳ ಸಂಘ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಪ್ರಕರಣವನ್ನು ಮಾರ್ಚ್ 23ಕ್ಕೆ ಮುಂದೂಡಿದೆ. ಹೋಟೆಲ್ ಉದ್ಯಮದವರು ಎತ್ತಿರುವ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ಪರ ವಕೀಲ ಕೆ. ಸತೀಶ್ ಭಟ್ ವಾದ ಮಂಡಿಸಿ, ನಗರದಲ್ಲಿ 40 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 6 ಲಕ್ಷ ಮಂದಿ ಉದ್ಯೋಗ ಹೊಂದಿದ್ದಾರೆ. ಆದರೆ, ಏಕಾಏಕಿ ಸಿಲಿಂಡರ್ ಸರಬರಾಜು ನಿಲ್ಲಿಸಿರುವುದರಿಂದ ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಪರ ವಕೀಲರು, ಇದೇ ವಿಷಯವನ್ನು ಮುಂಬೈ ಹೈಕೋರ್ಟ್‌ನಲ್ಲಿ ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿ ದಾಖಲೆ ಸಲ್ಲಿಸಿದರು. ಸಿಲಿಂಡರ್ ಪೂರೈಕೆ ಸರ್ಕಾರದ ನೀತಿ ವಿಚಾರವಾಗಿದ್ದು, ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು. ರಾಜ್ಯ ಸರ್ಕಾರವೂ ವಿವರಣೆ ನೀಡುವುದಾಗಿ ತಿಳಿಸಿದೆ.



