ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಮೇಲೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ನಿರ್ಮಾಪಕ ಎನ್.ಎಂ.ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಸುದೀಪ್ ವಿರುದ್ಧ ಸುಳ್ಳು ಆಸ್ತಿ ಸಂಪಾದನೆ ಮತ್ತು ವಂಚನೆಯ ಆರೋಪವನ್ನು ಸುರೇಶ್ ಮಾಡಿದ್ದರು.
ಸುದೀಪ್ ಅವರ ವಿರುದ್ಧ ಮಾನಹಾನಿಕರ ಮತ್ತು ಸಮಾಜದಲ್ಲಿ ಅವರ ಹೆಸರನ್ನು ಕೆಡಿಸುವಂತಹ ಆರೋಪದ ಪ್ರಕರಣವನ್ನು ದಾಖಲಿಸಲಾಗಿದೆ. ಸಮನ್ಸ್ ಜಾರಿ ಮಾಡುವ ಕ್ರಮದಲ್ಲಿ ಯಾವುದೇ ಅಕ್ರಮ ಕಂಡು ಬಂದಿಲ್ಲ. ಹಾಗಾಗಿ ರದ್ದು ಮಾಡಲಾಗದು ಎಂದು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣ ಸಂಬಂಧ ಐಪಿಸಿ ೪೯೯ ಮತ್ತು ೫೦೦ ಅಡಿಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಸುರೇಶ್ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು. ಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ ೧೩ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರ ಮಾಡಿದ್ದರು. ಜೊತೆಗೆ ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್‌ಗೆ ಸಮನ್ಸ್ ಜಾರಿಯಾಗಿತ್ತು. ನಿರ್ಮಾಪಕ ಎಂ.ಎನ್. ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಹಲವು ಫೋಟೋಗಳೊಂದಿಗೆ ಕೋರ್ಟ್ ಮುಂದೆ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.