Friday, April 18, 2025
Google search engine

Homeರಾಜ್ಯಸುದ್ದಿಜಾಲಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ : ಸಚಿವ ಜಮೀರ್ ಅಹ್ಮದ್

ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ : ಸಚಿವ ಜಮೀರ್ ಅಹ್ಮದ್

ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್

ಬೆಟ್ಟದಪುರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ವಸತಿ, ವಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿ. ಜಡ್. ಜಮೀರ್ ಅಹಮದ್ ಖಾನ್ ರವರು ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಆನಿವಾಳು ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಬಾರಿ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಇಲಾಖೆಗೆ 3200 ಕೋಟಿ ಅನುದಾನವನ್ನು ನೀಡಿದ್ದು, ಅದರಲ್ಲಿ 1050 ಕೋಟಿ ರೂಗಳನ್ನು ಶಿಕ್ಷಣಕ್ಕೆ ಮೀಸಲಿಡಲಾಗಿದೆ ಎಂದರು.

2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಐದು ವರ್ಷದಲ್ಲಿ 126 ವಸತಿ ಶಾಲೆಯ ಕಟ್ಟಡಗಳು ನಿರ್ಮಿಸಿದ್ದು, ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ವಸತಿ ಶಾಲೆಗಳನ್ನು ಹೊಸದಾಗಿ ನಿರ್ಮಿಸಿಲ್ಲ, ಮತ್ತೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಈ ವರ್ಷ 50 ವಸತಿ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಕಟ್ಟಡಗಳ ಕೆಲಸಗಳು ಸಂಪೂರ್ಣವಾಗಿವೆ. ಸದ್ಯದಲ್ಲೇ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಲಿದ್ದೇವೆ ಎಂದರು.

ವಸತಿ ಶಾಲೆಗಳಲ್ಲಿ ಬಡವರ ಮಕ್ಕಳು ಓದುತ್ತಿದ್ದು, ಹಣ ನೀಡಿ ಶಿಕ್ಷಣ ಪಡೆಯಲಾರದೆ ಮಕ್ಕಳು ಶಿಕ್ಷಣ ವಂಚಿತರಾಗಬಾರದು. ವಿದ್ಯಾರ್ಥಿಗಳು ದೇಶದ ಭವಿಷ್ಯದ ಚಿಂತಕರು, ಬಡತನಕ್ಕೆ ಹೆದರಿ ಯಾವುದೇ ಕಾರಣಕ್ಕೂ ಓದುವುದನ್ನು ನಿಲ್ಲಿಸಬಾರದು. ಶಿಕ್ಷಣ ಇದ್ದರೆ ಬದುಕನ್ನು ರೂಪಿಸಿಕೊಳ್ಳಬಹುದು. ಆದ್ದರಿಂದ ವಿದ್ಯಾರ್ಥಿಗಳ ಜೀವನ ಶಿಕ್ಷಕರ ಕೈಯಲ್ಲಿ ಇರುತ್ತದೆ, ವಸತಿ ಶಾಲೆಗಳಿಗೆ ಬಡ ಮಕ್ಕಳು ಬರುವುದರಿಂದ ಶಿಕ್ಷಕರು ಉತ್ತಮ ರೀತಿಯ ಶಿಕ್ಷಣವನ್ನು ನೀಡಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದರು.

ಈ ವಸತಿ ಶಾಲೆಯಲ್ಲಿ ಆರನೇ ತರಗತಿಯಿಂದ 10ನೇ ತರಗತಿವರೆಗೆ ಇದ್ದು, ಈ ವರ್ಷದಿಂದ ಪಿಯುಸಿ ಪ್ರಾರಂಭವಾಗಿದ್ದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಕಾಲೇಜುಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸಿಬಿಎಸ್ಸಿ ಶಿಕ್ಷಣವನ್ನು ಆರಂಭಿಸಲು ಚಿಂತಿಸಲಾಗಿದೆ ಎಂದರು.

ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ ವೆಂಕಟೇಶ್ ಮಾತನಾಡಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಈ ವಸತಿ ಶಾಲೆ ಮಂಜೂರಾಗಿದ್ದು, ಕಳೆದ 17 ವರ್ಷದಿಂದ ಖಾಸಗಿಯವರ ಬಾಡಿಗೆ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಈಗ 10 ಕೋಟಿ ವೆಚ್ಚದಲ್ಲಿ ಈ ಹೈಟೆಕ್ ಕಟ್ಟಡ ನಿರ್ಮಿಸಿದ್ದು, 500 ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು, 240 ಪಿಯುಸಿ ವಿದ್ಯಾರ್ಥಿಗಳು ಈ ಕಟ್ಟಡದ ಉಪಯೋಗ ಪಡೆದುಕೊಳ್ಳಬಹುದು ಎಂದರು.

ಸರ್ಕಾರ ಉತ್ತಮ ವ್ಯವಸ್ಥೆಯಿಂದ ನಿರ್ಮಿಸಿರುವ ಕಟ್ಟಡವು ಇದಾಗಿದ್ದು, ಪರಿಪೂರ್ಣವಾದ ಶಾಲೆಯಾಗಿದೆ. ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿರುವುದರಿಂದ ವಸತಿ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದರು. ಈ ಶಾಲೆಯಲ್ಲಿ ಪ್ರವೇಶಾತಿ 75% ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದು, 25 % ಇತರ ಸಮುದಾಯದವರಿಗೆ ಮೀಸಲಾಗಿದೆ.

ಬಡತನ ವಿರುವ ಮಕ್ಕಳು ಈ ಶಾಲೆಯಲ್ಲಿ ಓದುವುದರಿಂದ ಗ್ರಾಮಾಂತರ ಭಾಗಗಳಲ್ಲಿ ಈ ಶಾಲೆಯ ಅವಶ್ಯಕತೆ ಹೆಚ್ಚಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಪ್ರವೇಶಾತಿ ಕಡಿಮೆ ಇದೆ, ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಸರ್ಕಾರಿ ಶಾಲೆಗಳು ಭರ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಸರ್ಕಾರವು ಈ ಬಾರಿ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಕನ್ನಡದ ಜೊತೆಗೂ ಇಂಗ್ಲಿಷ್ ಮೀಡಿಯಂ ವಿದ್ಯಾಭ್ಯಾಸ ನೀಡುವ ಚಿಂತನೆಯಲ್ಲಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಹರದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಕಾಮಾಕ್ಷಮ್ಮ, ಹಲಗನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವೀಣಾ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಿರೂಪ ರಾಜೇಶ್,ಸರಸ್ವತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ. ಟಿ. ಸ್ವಾಮಿ, ರಹಮತ್ ಜಾನ್ ಬಾಬು, ಅಲ್ಪ ಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ, ಜಿಲ್ಲಾ ಅಧಿಕಾರಿ ಭಕ್ತ ಮಾರ್ಕಂಡಯ್ಯ,ತಹಸಿಲ್ದಾರ್ ಕುಂಜಿ ಅಹಮದ್, ಪ್ರಾಂಶುಪಾಲೆ ಕುಮಾರಿ ಎ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪೋಷಕರು, ಶಾಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular