ಮಂಡ್ಯ: ಸ್ವಾನುಭವ, ಪರಾನುಭವ ಹಾಗೂ ಲೋಕಾನುಭವಗಳು ಯಾವುದೇ ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಅನುಭವಗಳ ಮೂಟೆಯ ಸಾಧಕರೇ ಗೊರವಾಲೆ ಚಂದ್ರಶೇಖರ್ ಎಂದು ಮಾಂಡವ್ಯ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಕೆ.ಕೆ. ಚಂದ್ರಶೇಖರ್ ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿರುವ ಜಾನಪದ ಕಲಾವಿದ ಗೊರವಾಲೆ ಚಂದ್ರಶೇಖರ್ ಅವರಿಗೆ ವಿಕಾಸ ಟ್ರಸ್ಟ್, ಮಾರ್ಗದರ್ಶಿ ಟ್ರಸ್ಟ್ ಮತ್ತು ಹೊಂಗೆತೋಪು ಗೆಳೆಯರ ಬಳಗದ ವತಿಯಿಂದ ಸ್ಕಿಲ್‌ಫರ್ನ್ ಮಲ್ಟಿಮೀಡಿಯ ಅಕಾಡೆಮಿ ಕುವೆಂಪು ವೇದಿಕೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿದರು.

ಒಂದು ಚೆಂಡನ್ನು ಎಷ್ಟು ಬಲವಾಗಿ ನೆಲಕ್ಕೆ ಅಪ್ಪಳಿಸುತ್ತೇವೆಯೋ ಅಷ್ಟೇ ಎತ್ತರಕ್ಕೆ ಅದು ಚಿಮ್ಮುವುದು. ಹಾಗೆಯೇ ಎಲ್ಲ ಕಷ್ಟಗಳನ್ನು ಅನುಭವಿಸಿದವರೆ ಅಂತಿಮವಾಗಿ ಉನ್ನತವಾದುದ್ದನ್ನು ಪಡೆಯುತ್ತಾರೆ. ಹೀಗೆ ಎಲ್ಲ ಪೆಟ್ಟುಗಳನ್ನು ತಿಂದ ಗೊರವಾಲೆ ಚಂದ್ರಶೇಖರ್ ಜಾನಪದ ಅಕಾಡೆಮಿಯ ಒಳಹೊಕ್ಕು ಈಗ ವಿಶ್ವವಿದ್ಯಾಲಯದ ಮೆಟ್ಟಿಲು ಏರಿದ್ದಾರೆ. ಅವರ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಮಾತನಾಡಿ, ಅರ್ಹ ವ್ಯಕ್ತಿಗೆ ಅರ್ಹ ಹುದ್ದೆ ದೊರಕಿದೆ. ಬಹುಮುಖ ಪ್ರತಿಭೆಯ ಚಂದ್ರಶೇಖರ್ ಅವರು ತಮಗೆ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜಾನಪದ ಕ್ಷೇತ್ರಕ್ಕೆ ಶಾಶ್ವತ ಕೊಡುಗೆ ನೀಡಲಿ ಎಂದು ಆಶಿಸಿದರು.
ಕನ್ನಡ ಉಪನ್ಯಾಸಕ ಲೋಕೇಶ ಬೆಕ್ಕಳಲೆ ಮಾತನಾಡಿ, ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಹುಟ್ಟು ಕಲಾವಿದರಾದ ಗೊರವಾಲೆ ಚಂದ್ರಶೇಖರ್ ಕಾರ್ಯೋನ್ಮುಖರಾಗಲಿ ಎಂದು ಶುಭ ಕೋರಿದರು.
ವಕೀಲರಾದ ಮನೋಹರ್ ಎಚ್.ಜೆ ಮಾತನಾಡಿ, ನನ್ನ ಕಾಲೇಜು ದಿನಗಳ ಗೆಳೆಯ ಚಂದ್ರಶೇಖರ್. ಪಿಇಎಸ್ ಕಾಲೇಜಿನಲ್ಲಿ ಜನಪದ ವಿಭಾಗ ಆರಂಭವಾದಾಗ ಪ್ರೊ. ಜಯಪ್ರಕಾಶ್ ಗೌಡರ ರಂಗಭೂಮಿ ಹಾಗೂ ಜಾನಪದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡವರು ಗೊರವಾಲೆ ಚಂದ್ರಶೇಖರ್. ಅವರು ಜಾನಪದ ವಿಶ್ವವಿದ್ಯಾಲಯದ ಘನತೆ ಎತ್ತಿ ಹಿಡಿಯಲಿ ಎಂದು ತಿಳಿಸಿದರು.
ಸ್ವರ್ಣಟಿವಿ ಮುಖ್ಯಸ್ಥರು, ಹಿರಿಯ ಪತ್ರಕರ್ತರೂ ಆದ ಕೆ. ಶಂಭುಗೌಡ ಕಬ್ಬನಹಳ್ಳಿ ಮಾತನಾಡಿ, ಗೊರವಾಲೆ ಚಂದ್ರಶೇಖರ್ ಅವರ ಸದಾ ನಗುವಿನ ಹಿಂದೆ ಒಂದು ಶೋಕ ಸಾಗರವಿದೆ. ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಕಲಾ ಸೇವೆ ನೀಡುತ್ತಿದ್ದಾರೆ. ಅವರ ಪ್ರತಿಭೆ ಜಾನಪದ ವಿಶ್ವವಿದ್ಯಾಲಯದಲ್ಲೂ ಅನಾವರಣಗೊಳ್ಳಲಿ. ಪ್ರತಿ ತಾಲೂಕಿನಲ್ಲಿ ಜಾನಪದ ಕೇಂದ್ರವನ್ನು ತೆರೆಯಲು ಅವರು ಪ್ರಯತ್ನಿಸಲಿ ಎಂದು ಶುಭ ಕೋರಿದರು.
ಮಾರ್ಗದರ್ಶಿ ಟ್ರಸ್ಟ್ ಅಧ್ಯಕ್ಷರಾದ ಕೆ.ಸಿ.ಲೋಕೇಶ್ ಮಾತನಾಡಿ, ಜಾನಪದ ಜ್ಞಾನ ಯಾವುದೇ ಸಮಾಜಕ್ಕೆ ಬಹಳ ಮುಖ್ಯ. ಪಾಶ್ಚಾತ್ಯ ದೇಶಗಳಲ್ಲೂ ಅದಕ್ಕೆ ಅಪಾರ ಮಾನ್ಯತೆ ನೀಡಲಾಗಿದೆ ಎಂದು ತಿಳಿಸಿ ಚಂದ್ರಶೇಖರ್ ಅವರಿಗೆ ಶುಭ ಕೋರಿದರು. ಚಿಂತಕ, ಉದ್ಯಮಿ ಮುತ್ತಗೆರೆ ಮಂಜು ಮಾತನಾಡಿ, ಚಂದ್ರಶೇಖರ್ ಅವರ ಆಯ್ಕೆಯಿಂದ ವಿವಿಗೆ ಲಾಭವಾಗಲಿದೆ ಎಂದು ತಿಳಿಸಿದರು. ವಿಕಾಸ ಟ್ರಸ್ಟ್ ನಿರ್ದೇಶಕ ದೇವರಾಜ್ ಪಂಡಿತ್ ಅಧ್ಯಕ್ಷೀಯ ನುಡಿಗಳನ್ನು ಹಾಡಿದರು.
ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕ ಅಧ್ಯಕ್ಷೆ ಸುಜಾತ ಕೃಷ್ಣ, ಕವಿ ಕೊತ್ತತ್ತಿರಾಜು, ಶ್ರೀನಿವಾಸ ರಾಘವಾಚಾರ್, ಕಲಾವಿದರಾದ ಉಮಾಶಂಕರ್, ಮಧುಸೂದನ್ ದಾಸ್, ಸೂರ್ಯ ಸೌಂಡ್ಸ್ ರವಿ, ಗೊರವಾಲೆ ರುದ್ರಪ್ಪ, ಲೋಕೇಶ್ ನೇರಲಕೆರೆ, ಶಿವಕುಮಾರ್ ಗೊರವಾಲೆ, ಕಾಂಗ್ರೆಸ್ ಮುಖಂಡ ವೆಂಕಟೇಶ್ ಇನ್ನಿತರ ಸಂಘ-ಸAಸ್ಥೆಯ ಮುಖ್ಯಸ್ಥರು ಹಾಜರಿದ್ದು ಶುಭ ಕೋರಿದರು.
ವಿಕಾಸ ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಹಾಗೂ ನಿರ್ದೇಶಕ ನಾ. ಲೋಕೇಶ ಸ್ಥಪತಿ ಕಾರ್ಯಕ್ರಮ ನಡೆಸಿಕೊಟ್ಟರು. ಟ್ರಸ್ಟ್ ಖಜಾಂಚಿ ಯೋಗೇಶ್ ವೈ.ಸಿ., ನಿರ್ದೇಶಕಿ ನಂದಿನಿ ಉಮೇಶ್ ಹಾಜರಿದ್ದರು.