ಮಂಗಳೂರು (ದಕ್ಷಿಣ ಕನ್ನಡ): ಅಂಕೋಲಾದ ಶಿರೂರು ಬಳಿ ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿತ ದುರಂತ ಸಂಭವಿಸಿದ್ದು, ಐಡಿಯಲ್ ರೋಡ್ ಬಿಲ್ಡರ್ಸ್ (ಐಆರ್‌ಬಿ) ಮತ್ತು ಕೇಂದ್ರ ಸರ್ಕಾರ ನೇರ ಹೊಣೆ ಎಂದು ರಾಜ್ಯ ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಮತ್ತು ಬಂದರು ಖಾತೆ ಸಚಿವ ಮಂಕಾಳ ವೈದ್ಯ ಆಪಾದಿಸಿದ್ದಾರೆ.
ಮಂಗಳೂರು ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಜು.೧೧ ರಂದು ಗುಡ್ಡ ಕುಸಿತ ದುರಂತ ಸಂಭವಿಸಿದೆ. ಅಂದಿನಿಂದ ನಾನು ಅಲ್ಲೇ ಇದ್ದೇನೆ. ವಿಧಾನಮಂಡಲ ಅಧಿವೇಶನವನ್ನು ಬಿಟ್ಟು ನಾನು ಮತ್ತು ಶಾಸಕ ಸತೀಶ್ ಸೈಲ್ ಅಲ್ಲೇ ಇದ್ದೆವು. ನಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇವೆ. ಕಳೆದ ೧೧ ವರ್ಷದಿಂದ ಐಆರ್‌ಬಿ ಕಾಮಗಾರಿ ನಡೆಸುತ್ತಿದ್ದು, ಇನ್ನೂ ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಅವರಲ್ಲಿ ಒಂದು ಹಿಟಾಚಿ ಕೂಡ ಇಲ್ಲ. ಅದನ್ನು ಕೂಡ ನಾವು ಬೇರೆ ಕಡೆಯಿಂದ ತರಿಸಿದ್ದೇವೆ ಎಂದು ಹೇಳಿದರು.
ಕೇಂದ್ರ ತಂಡ ಇಂಥದ್ದೇ ಜಾಗದಲ್ಲಿ ಕುಸಿಯುತ್ತದೆ ಎಂದು ಹೇಳಿದ್ದರೂ ಏನೂ ಮಾಡಲಾಗಲಿಲ್ಲ. ಬೇರೆ ರಾಜ್ಯದವರೂ ಸಾವಿಗೀಡಾಗಿದ್ದಾರೆ. ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಾವು ನ್ಯಾಯವಾಗಿ ಅಲ್ಲಿ ಇದ್ದೇವೆ. ಈಗ ಆಗಬಾರದ್ದು ಆಗಿಹೋಗಿದೆ. ಯಾರೂ ಯೋಚನೆ ಮಾಡದ ರೀತಿಯಲ್ಲಿ ಗುಡ್ಡ ಕುಸಿತವಾಗಿದೆ ಎಂದು ಅವರು ವಿಷಾದಿಸಿದರು.