ಮಂಗಳೂರಿನ ಸುರತ್ಕಲ್ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿ ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯುವತಿಯ ಪೋಷಕರು ಮಾಧ್ಯಮಗಳ ಮುಂದೆ ಬಂದು ಪ್ರೆಸ್ ಮೀಟ್ ಮಾಡಿದ್ದಾರೆ.
ಇದೇ ವಿಚಾರದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಹಿಂಜಾವೇ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ಪಿಜಿಯಲ್ಲಿ ಹುಡುಗ- ಹುಡುಗಿ ಜೊತೆಗಿರುವುದಕ್ಕೆ ಹೇಗೆ ಅವಕಾಶ ಕೊಟ್ಟಿದ್ದಾರೆ, ಪೊಲೀಸರು ಯಾಕೆ ಇದರ ಬಗ್ಗೆ ತನಿಖೆ ನಡೆಸುತ್ತಿಲ್ಲ. ಅಲ್ಲಿನ ಪಿಜಿ ಸೆಂಟರ್ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲಿ ಯುವತಿಯರಿಗೆ ಡ್ರಗ್ಸ್ ಕೊಟ್ಟು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೇ ಎಂದು ಪ್ರಶ್ನೆ ಮಾಡಿದ್ದಾರೆ. ಡ್ರಗ್ಸ್ ಬಗ್ಗೆ ಮಂಗಳೂರು ಕಮಿಷನರ್ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಇಂಥ ಅಕ್ರಮ ಪಿಜಿಗಳ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ಕೇರಳದಲ್ಲಿ ಅನೇಕ ಯುವತಿಯರನ್ನು ಲವ್ ಜಿಹಾದ್ ಮೂಲಕ ಬಲೆಗೆ ಬೀಳಿಸಿರುವ ಘಟನೆಗಳು ನಡೆದಿದ್ದು, ಇದು ಕೂಡ ಅಂತಹದ್ದೇ ಕೃತ್ಯ. ನಾವು ಇದನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಯುವತಿಯ ತಂದೆ ವಿಶ್ವನಾಥ್, ನನ್ನ ಮಗಳು ಪರಾರಿಯಾದ ಪ್ರಕರಣದಲ್ಲಿ ಲವ್ ಜಿಹಾದ್ ನಡೆದಿರುವ ಬಗ್ಗೆ ಆರೋಪಿಸಿದ್ದಾರೆ. ತಮ್ಮ ಮಗಳು ವೈಶಾಲಿ ಲವ್ ಜಿಹಾದ್‌ಗೆ ಒಳಗಾಗಿದ್ದಾಳೆ ಮತ್ತು ಇದರ ಹಿಂದೆ SDPI ಸಂಘಟನೆಯ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ಮಗಳೊಂದಿಗೆ ಪರಾರಿಯಾದ ಯುವಕ ಮೊಹಮ್ಮದ್ ಮಿದ್ಲಾಜ್ SDPI ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ಆ ಯುವಕ ಕೆಲಸ ಮಾಡುತ್ತಿದ್ದ ಅಟ್ಲಾಂಟಿಕ್ ಜುವೆಲ್ಲರ್ಸ್ ಮಾಲೀಕರು SDPI ಮುಖಂಡರು ಎಂದು ತಿಳಿದುಬಂದಿದೆ. ಮಿದ್ಲಾಜ್ ಪರವಾಗಿ ಹಲವರು ವಯನಾಡು ಪೊಲೀಸ್ ಠಾಣೆಗೆ ಬಂದವರು ಕೂಡ ಅದೇ ಸಂಘಟನೆಗೆ ಸೇರಿದವರು ಎಂದು ದೂರಲಾಗಿದೆ. ಮಗಳು ಯಾವುದೇ ಮಾದಕ ವ್ಯಸನ ಅಥವಾ ಬ್ರೈನ್ ವಾಶ್‌ಗೆ ಒಳಗಾಗಿದ್ದಳೇ ಎಂಬುದು ತಮಗೆ ನಿಖರವಾಗಿ ತಿಳಿದಿಲ್ಲ. ಆದರೆ ಆಕೆ ಸುರಕ್ಷಿತವಾಗಿ ಮನೆಗೆ ಮರಳಬೇಕು. ಈ ಬಗ್ಗೆ ಪೊಲೀಸ್ ತನಿಖೆ ಆಗಬೇಕು ಎಂದು ವಿಶ್ವನಾಥ್ ಆಗ್ರಹಿಸಿದ್ದಾರೆ.



