ಚಿಕ್ಕಬಳ್ಳಾಪುರ: ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾಗಲು ಹಿಂದೂ ಮಹಾಸಭಾ ಕಾರಣ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ಅವರು, ಹಿಂದೂ ಮಹಾಸಭಾ ಭಾರತವನ್ನು ಇಬ್ಭಾಗ ಮಾಡಲು ಹೇಳಿತ್ತು. ಆ ಬಳಿಕ ನೆಹರೂ ಬಗ್ಗೆ ಅಪಪ್ರಚಾರ ಮಾಡಿತು ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಹಿಂದೂ ಮಹಾಸಭಾದವರೇ ಭಾರತದಿಂದ ಪಾಕಿಸ್ತಾನದಿಂದ ಇಬ್ಭಾಗ ಮಾಡಲು ಹೇಳಿದ್ದರು. ದೇಶ ಇಬ್ಭಾಗ ಮಾಡಿ ನಂತರ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಬಗ್ಗೆ ಅಪಪ್ರಚಾರ ಮಾಡಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ಅಯೋಧ್ಯೆ ರಾಮಮಂದಿರ ಉದ್ಘಾಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ೧೧ ದಿನ ಉಪವಾಸ ಮಾಡಿದ್ದರೇ? ಎಂದು ಅನುಮಾನ ವ್ಯಕ್ತಪಡಿಸಿ ವೀರಪ್ಪ ಮೊಯ್ಲಿ ಹೊಸ ವಿವಾದ ಸೃಷ್ಟಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮೊಯ್ಲಿ, ೧೧ ದಿನಗಳ ಉಪವಾಸ ಆಚರಿಸಿದರೆ ಮನುಷ್ಯ ಜೀವಂತವಾಗಿರುವುದು ಅಸಾಧ್ಯವೆಂದು ನನಗೆ ಹೇಳಲಾಗಿದೆ. ವೈದ್ಯರ ಅಭಿಪ್ರಾಯದಂತೆ, ಒಬ್ಬ ವ್ಯಕ್ತಿಯು ಕೇವಲ ತೆಂಗಿನ ನೀರು ಕುಡಿದು ಬದುಕುವುದು ಅಸಾಧ್ಯ. ಆದರೆ ಪ್ರಧಾನಿ ಮೋದಿ ತಾವು ೧೧ ದಿನ ಉಪವಾಸ ಮಾಡುತ್ತಿದ್ದೆ ಮತ್ತು ಅನೇಕ ಸ್ಥಳಗಳಿಗೆ ಭೇಟಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಉಪವಾಸ ಇದ್ದಂತೆ ಕಾಣಲಿಲ್ಲ ಎಂದು ಆರೋಪಿಸಿದ್ದರು.