ಮಂಗಳೂರು (ದಕ್ಷಿಣ ಕನ್ನಡ): ಹಿಂದೂಗಳು ಹಿಂದೂ ವ್ಯಾಪಾರಿಗಳ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಎಂದು ಹೇಳಿಕೆ ನೀಡಿದ್ದ ವಿಶ್ವ ಹಿಂದೂ ಪರಿಷತ್‌ನ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಕೇಸ್ ದಾಖಲಾಗಿದೆ. ಶರಣ್ ಪಂಪ್‌ವೆಲ್ ಅವರು ತನ್ನ ಬೆಂಬಲಿಗರೊಂದಿಗೆ ಹೋಗಿ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿರುವ ಹಿಂದೂ ವ್ಯಕ್ತಿಗಳ ಮಾರಾಟದ ಅಂಗಡಿಗಳ ಮೇಲೆ ಕೇಸರಿ ಧ್ವಜವನ್ನು ನೆಟ್ಟು ತದನಂತರ ಎಲ್ಲಾ ಹಿಂದೂಗಳು ತಮಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಹಿಂದೂ ಸಮುದಾಯದ ವ್ಯಾಪಾರಸ್ಥರ ಅಂಗಡಿಗಳಲ್ಲಿ ಮಾತ್ರ ಪಡೆದುಕೊಳ್ಳುವಂತೆ ಹೇಳಿಕೆ ನೀಡಿದ್ದರು. ಈ ಕೃತ್ಯ ಹಾಗೂ ಪತ್ರಿಕಾಗೋಷ್ಠಿ ಭಿನ್ನಕೋಮಿನ ನಡುವೆ ಕೋಮು ಸಾಮರಸ್ಯಕ್ಕೆ ದಕ್ಕೆ ಉಂಟು ಮಾಡಿರುವುದಾಗಿರುತ್ತದೆ. ಹೀಗಾಗಿ ದಕ್ಷಿಣ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿ.ಎಸ್.ಐ ಮನೋಹರ್ ಪ್ರಸಾದ್ ಇವರ ದೂರಿನ ಮೇಲೆ ಶರಣ್ ಪಂಪ್‌ವೆಲ್ ಹಾಗೂ ಇತರರ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.