ಬೆಂಗಳೂರು : ಸಿಎಂ ಕುರ್ಚಿ ವಿಚಾರದ ಹಗ್ಗ-ಜಗ್ಗಾಟದ ಹಿನ್ನಲೆ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ. ನಮನ್ನು ಕರೆದರೆ ನಾವೂ ಹೋಗುತ್ತೇವೆ. ಒಳ್ಳೆಯದಾಗುವುದಾದರೆ ಖುದ್ದು ನಾನೇ ಇಬ್ಬರನ್ನೂ ಪ್ರತ್ಯೇಕವಾದ ಉಪಾಹಾರ ಕೂಟಕ್ಕೆ ಆಹ್ವಾನಿಸುವ ಬಗ್ಗೆ ಪರಿಶೀಲಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ಅವರ ಉಪಹಾರ ಕೂಟದ ಬಗ್ಗೆ ಕೇಳಿ ಬರುತ್ತಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಹಾಗೂ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದಾ ಕಾಲ ಆರಾಮಾಗಿದ್ದಾರೆ. ಈಗ ಸಂತೋಷದ ವಿಚಾರ ವಾತಾವರಣ ತಿಳಿಯಾಗಿರುವುದು ಮತ್ತು ಯಾರೂ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಕೆಲವರು ಅನಗತ್ಯವಾಗಿ ವದಂತಿಗಳನ್ನು ಹರಡಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಕೆಲವರು ಬೆಂಬಲಿಗರು ಮುಡಿ ಕೊಡುವುದು ಸೇರಿದಂತೆ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ನಡೆಸುವುದು ಸಹಜ. ಒಬ್ಬೊಬ್ಬರ ಆಕಾಂಕ್ಷೆಗಳು ಒಂದೊಂದು ರೀತಿಯಲ್ಲಿರುತ್ತವೆ ಎಂದು ತಿಳಿಸಿದರು.
ಇನ್ನೂ ವರದಿ ಸಲ್ಲಿಕೆಯ ಬಗ್ಗೆ ತಿಳಿಸಿದ ಅವರು 2024ರ ಬೆಳಗಾವಿಯ ಸುವರ್ಣಸೌಧದದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ ನಡೆದ ಗಲಭೆಯ ಕುರಿತು ವಿಚಾರಣೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಾಧೀಶರಾದ ಎಚ್.ಆರ್. ಬನ್ನಿಕಟ್ಟಿ ಅವರ ನೇತೃತ್ವದ ಏಕ ಸದಸ್ಯ ಆಯೋಗ ತನ್ನ ವರದಿಯನ್ನು ಗೃಹ ಸಚಿವರಿಗೆ ಸಲ್ಲಿಸಿದೆ ಎಂದರು. ಈ ವೇಳೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಉಪಸ್ಥಿತರಿದ್ದರು.



