ಅಮರಾವತಿ: ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ 100ನೇ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಂದು ಬೆಳಗ್ಗೆ 6:23ಕ್ಕೆ ಜಿಎಸ್‌ಎಲ್‌ವಿ-ಎಫ್ 15 ರಾಕೆಟ್ ಮೂಲಕ ಎನ್‌ವಿಎಸ್-02 ಉಪಗ್ರಹವನ್ನು ಉಡಾವಣೆ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ನಡೆಸಿದ 100ನೇ ಯೋಜನೆ ಇದಾಗಿದ್ದು, ಈ ಮೂಲಕ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.
27.30 ಗಂಟೆಗಳ ಕ್ಷಣಗಣನೆ ಮುಗಿಯುತ್ತಿದ್ದಂತೆ 50.9 ಮೀಟರ್ ಎತ್ತರದ ರಾಕೆಟ್ ಶ್ರೀಹರಿಕೋಟಾದ 2ನೇ ಉಡಾವಣಾ ಪ್ಯಾಡ್‌ನಿಂದ ನಭಕ್ಕೆ ಚಿಮ್ಮಿತು.
ಜಿಎಸ್ಎಲ್‌ವಿ-ಎಫ್ 15 ಯೋಜನೆ ಭಾರತದ ಜಿಎಸ್‌ಎಲ್‌ವಿಯ 15ನೇ ಹಾರಾಟವಾಗಿದ್ದು, ಭಾರತೀಯ ನಿರ್ಮಾಣದ ಕ್ರಯೋಜನಿಕ್ ಎಂಜಿನ್ ಬಳಸಿ ನಡೆಸಲಿರುವ 8ನೇ ಕಾರ್ಯಾಚರಣೆ (ಒಟ್ಟಾರೆ 11ನೇ ಹಾರಾಟ) ಎನಿಸಿಕೊಂಡಿದೆ.
2023ರ ಮೇ 29ರಂದು 2ನೇ ತಲೆಮಾರಿನ ಉಪಗ್ರಹಗಳಲ್ಲಿ ಮೊದಲನೆಯದಾದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್ -01 ಅನ್ನು ಯಶಸ್ವಿಯಾಗಿ ಹೊತ್ತೊಯ್ದ ಜಿಎಸ್‌ಎಲ್‌ವಿ-ಎಫ್ 12 ಮಿಷನ್ ಅನ್ನು ಜಿಎಸ್ಎಲ್‌ವಿ-ಎಫ್ 15 ಮಿಷನ್ ಅನುಸರಿಸಲಿದೆ.
ಈ ಎನ್‌ವಿಎಸ್-02 ಉಪಗ್ರಹವನ್ನು ಯು.ಆರ್.ಸ್ಯಾಟಲೈಟ್ ಸೆಂಟರ್ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದೆ. 2,250 ಕೆ.ಜಿ.ಭಾರವಿದ್ದು, ಎಲ್1, ಎಲ್5 ನ್ಯಾವಿಗೇಷನ್ ಪೇ ಲೋಡ್ ಮತ್ತು ಸಿ ಬ್ಯಾಂಡ್ ಜೊತೆಗೆ ಹೆಚ್ಚುವರಿಯಾಗಿ ಎಸ್ ಬ್ಯಾಂಡ್‌ಗಳನ್ನು ಹೊಂದಿದೆ. ಈ ಉಪಗ್ರಹವು ಭೂಮಿ, ವಾಯು ಮತ್ತು ಸಾಗರ ಸಂಚಾರ, ನಿಖರ ಕೃಷಿ ಮತ್ತು ವ್ಯವಸಾಯ ಚಟುವಟಿಕೆ, ನೌಕೆಗಳ ನಿರ್ವಹಣೆ, ಮೊಬೈಲ್ ಲೊಕೇಷನ್ ಆಧಾರಿತ ಸೇವೆಗಳು, ಸ್ಯಾಟಲೈಟ್‌ಗಳ ಕಕ್ಷೆಯ ನಿರ್ಧಾರ, ಇಂಟರ್ನೆಟ್ ಆಫ್ ಥಿಂಗ್ಸ್ ಆಧಾರಿತ ಅಪ್ಲಿಕೇಷನ್‌ಗಳು, ತುರ್ತು ಮತ್ತು ಸಮಯಾಧಾರಿತ ಸೇವೆಗಳಿಗೆ ನೆರವು ನೀಡಲಿದೆ.
ಅಭಿನಂದನೆ
ಇಸ್ರೋದ ಈ ಐತಿಹಾಸಿಕ ಸಾಧನೆಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಭಿನಂದನೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಶ್ರೀಹರಿಕೋಟಾದಿಂದ 100ನೇ ಉಡಾವಣೆಯ ಹೆಗ್ಗುರುತನ್ನು ಸಾಧಿಸಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ಜಿಎಸ್ಎಲ್‌ವಿ-ಎಫ್ 15 / ಎನ್‌ವಿಎಸ್ -02 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ನೀವು ನಮ್ಮನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡಿದ್ದೀರಿʼʼ ಎಂದು ತಿಳಿಸಿದ್ದಾರೆ.