ವರದಿ: ಸ್ಟೀಫನ್ ಜೇಮ್ಸ್ ಬೆಳಗಾವಿ
ಬೆಳಗಾವಿ: ನಗರದ ಹೃದಯಭಾಗವಾದ ಹುತಾತ್ಮ ಚೌಕ್‌ನಲ್ಲಿ ಇಂದು ಬೆಳಗಾವಿಯ ಐತಿಹಾಸಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಗೆ ಭವ್ಯ ಚಾಲನೆ ನೀಡಲಾಗಿದೆ. ಈ ಮೆರವಣಿಗೆಗೆ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರ ನೇತೃತ್ವದಲ್ಲಿ ಚಾಲನೆ ಸಿಕ್ಕಿದ್ದು, ನಗರದಾದ್ಯಂತ ಉತ್ಸವದ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಈ ವಿಸರ್ಜನಾ ಮೆರವಣಿಗೆಯಲ್ಲಿ ಡೋಲ್ ತಾಸಾ ತಂಡಗಳು, ವೈವಿಧ್ಯಮಯ ವ್ಯಾದ್ಯಮೇಳಗಳು ಮತ್ತು ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿವೆ. ಎಲ್ಲೆಂದರಲ್ಲಿ ತಾಳಮೇಳದ ಸದ್ದು, ನೃತ್ಯ ವೈಭವ, ದೇವಿಯ ಭಕ್ತಿಯಿಂದ ತುಂಬಿದ ಭಕ್ತರ ಉತ್ಸಾಹ ಈ ಮೆರವಣಿಗೆಯನ್ನು ವಿಶೇಷಗೊಳಿಸುತ್ತಿದೆ.
ಮೆರವಣಿಗೆಯು ನಿರ್ವಹಣೆಯಾದಂತಿಲ್ಲದೆ ಸುವ್ಯವಸ್ಥಿತವಾಗಿ ಸಾಗಲೆಂದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೆರವಣಿಗೆಯ ಭದ್ರತೆಗೆ 4,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಭದ್ರತಾ ಕಾರ್ಯಾಚರಣೆಗೆ ಡಿಐಜಿ ನೇತೃತ್ವ ನೀಡುತ್ತಿದ್ದಾರೆ. ಜೊತೆಗೆ 9 ಎಸ್ಪಿಗಳು, 25 ಡಿಎಸ್ಪಿಗಳು, 87 ಸಿಪಿಐಗಳು ಮತ್ತು 250ಕ್ಕೂ ಹೆಚ್ಚು ಪಿಎಸ್ಐಗಳು ಸುರಕ್ಷತೆಗೆ ನಿಯೋಜನೆಗೊಂಡಿದ್ದಾರೆ.

ಮೆರವಣಿಗೆಯ ಮೇಲೆ 700 ಸಿಸಿ ಕ್ಯಾಮೆರಾಗಳು ಹಾಗೂ 14 ಡ್ರೋಣಗಳ ಮೂಲಕ ನಿಗಾ ಇಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಇದೇ ಮೊದಲಬಾರಿಗೆ ಇಷ್ಟು ಮಹತ್ತರ ಮಟ್ಟದಲ್ಲಿ ತಂತ್ರಜ್ಞಾನ ಬಳಸಿ ಮೆರವಣಿಗೆಯ ಮೇಲೆ ನಿಗಾ ವಹಿಸಲಾಗುತ್ತಿದೆ.
ಈ ವರ್ಷದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ 1,000ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳು ಭಾಗವಹಿಸುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದು, ಈ ದೃಶ್ಯವನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಮುಂಬೈ ಹೊರತುಪಡಿಸಿ, ಇಡೀ ಕರ್ನಾಟಕದಲ್ಲಿ ಬೆಳಗಾವಿಯಲ್ಲಿ ಈ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ ಎಂಬ ಹೆಗ್ಗಳಿಕೆ ಇಲ್ಲಿನ ಜನತೆಗೆ ಇದೆ.
ಈ ಉತ್ಸವಕ್ಕೆ ಒಂದು ಐತಿಹಾಸಿಕ ಹಿನ್ನೆಲೆ ಇದೆ. 1905ರಲ್ಲಿ ಬ್ರಿಟಿಷರ ವಿರುದ್ಧ ಜನಜಾಗೃತಿ ಮೂಡಿಸಲು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರ ಪ್ರೇರಣೆಯಿಂದ ಬೆಳಗಾವಿಯಲ್ಲಿ ಮೊದಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.