ಮಂಗಳೂರು (ದಕ್ಷಿಣ ಕನ್ನಡ):ಕಾರಿನ ಹಿಟ್ ಅಂಡ್ ರನ್ ಪ್ರಕರಣ ನಡೆದು ಯುವತಿಯೋರ್ವಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿ ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರಲ್ಲಿ ನಡೆದಿದೆ. ಲೇಡಿ ಹಿಲ್ ಮಣ್ಣಗುಡ್ಡ ಮುಖ್ಯ ರಸ್ತೆಯ ಈಜುಕೊಳ ಮುಂಭಾಗದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಯುವತಿಯನ್ನು ಸುರತ್ಕಲ್ ಬಾಳದ ರೂಪಶ್ರೀ (23) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಸ್ವಾತಿ(26) ಹಿತಾನ್ವಿ(16), ಕೃತಿಕಾ(16), ಯತಿಕಾ ಎಂದು ಗುರುತಿಸಲಾಗಿದೆ.
ಹುಂಡೈ ಇಯೋನ್ ಕಾರು ಮಣ್ಣಗುಡ್ಡ ಕಡೆಯಿಂದ ಲೇಡಿಹಿಲ್ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಬಂದು ಜ್ಯುವೆಲ್ಲರಿ ಬಳಿ ಫುಟ್ ಪಾತಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆ ಚಲಾಯಿಸಿಕೊಂಡು ಹೋಗಿದೆ. ಅಪಘಾತ ನಡೆದ ಬಳಿಕ ಸ್ಥಳದಿಂದ ಕಾರು ಸಮೇತ ಪರಾರಿಯಾಗಿದ್ದ ಚಾಲಕ ಕಮಲೇಶ್ ಬಲದೇವ್ ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಅಪಘಾತ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.