ಬೆಂಗಳೂರು: ಚೀನಾದಲ್ಲಿ ಹೊಸ ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ (ಹೆಚ್‌ಎಂಪಿವಿ) ಅಬ್ಬರಿಸಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಚೀನಾದಲ್ಲಿ ಕಾಣಿಸಿಕೊಂಡಿರುವ ಹೆಚ್‌ಎಂಪಿವಿ ವೈರಸ್ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿರುವ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆ ವೈರಸ್ ನಿಯಂತ್ರಿಸಲು ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನತೆ ಬಳಿ ಮನವಿ ಮಾಡಿಕೊಂಡಿದೆ.
ಸರ್ಕಾರದ ಮಾರ್ಗಸೂಚಿಗಳು ಇಂತಿವೆ:
- ಜ್ವರ ಇದ್ದರೆ ಜನನಿಬಿಡ ಪ್ರದೇಶಕ್ಕೆ ಹೋಗದಂತೆ ಹಾಗೂ ಅನಗತ್ಯ ಓಡಾಟ ತಪ್ಪಿಸಿ.
- ಆಗಾಗ್ಗೆ ಕೈಗಳನ್ನು ಸಾಬೂನು ಹಾಗೂ ಸ್ಯಾನಿಟೈಸರ್‌ಗಳಿಂದ ಸ್ವಚ್ಛಗೊಳಿಸಿ.
- ಜ್ವರ, ಕೆಮ್ಮು, ನೆಗಡಿ ಇರುವವರು ಆದಷ್ಟು ಹೊರಗೆ ಓಡಾಡದೆ ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯಿರಿ.
- ಇಂತಹವರು ಬಳಸಿದ ಟವಲ್ ಮತ್ತು ಬಟ್ಟೆಗಳನ್ನು ಬೇರೆಯವರು ಬಳಸದಿರಿ.
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ತಪ್ಪಿಸಿ.
- ಸ್ವಯಂ ಔಷಧಗಳನ್ನು ಸೇವಿಸದೆ ನೆಗಡಿ, ಕೆಮ್ಮು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಿರಿ.
- ಮನೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ, ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ.
- ಪೌಷ್ಠಿಕಾಂಶವಿರುವ ಆಹಾರ ಸೇವಿಸಿ.
- ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನಲ್ಲಿ ಸಾಮಾನ್ಯ ಶೀತ, ಐಎಲ್‌ಯ ಮತ್ತು ಸಾರಿ ಪ್ರಕರಣಗಳಲ್ಲಿ ಯಾವುದೇ ಗಮನಾರ್ಹ ಏರಿಕೆ ಇಲ್ಲ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
HMPV ಒಂದು ಉಸಿರಾಟದ ಕಾಯಿಲೆಯಾಗಿದ್ದು, ಚಳಿಗಾಲದಲ್ಲಿ ಶೀತ ಮತ್ತು ಜ್ವರದ ತರಹದ ಲಕ್ಷಣಗಳನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ವಯಸ್ಸಾದ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ.