ಬೆಂಗಳೂರು: ಎಚ್‌ಎಂಟಿ ಸ್ವಾಧೀನದಲ್ಲಿರುವ ರೂ. ೧೪,೩೦೦ ಕೋಟಿ ಮೌಲ್ಯದ ೧೮೦ ಎಕರೆ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಿಂಪಡೆಯಲು ಅಗತ್ಯ ಕ್ರಮ ಜರುಗಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಎಚ್‌ಎಂಟಿಗೆ ನೀಡಲಾಗಿದ್ದ ೪೪೩ ಎಕರೆ ಜಮೀನಿನ ಪೈಕಿ ೧೬೦ ಎಕರೆ ಪ್ರದೇಶವನ್ನು ಸರ್ಕಾರಿ ಮತ್ತು ಖಾಸಗಿಯವರಿಗೆ ಮಾರಾಟ ಅಥವಾ ಲೀಸ್ ಆಧಾರದಲ್ಲಿ ಈಗಾಗಲೇ ಪರಭಾರೆ ಮಾಡಲಾಗಿದೆ. ಆ ಬಳಿಕ ೧೮೦ ಎಕರೆ ಪ್ರದೇಶದಲ್ಲಿ ಅರಣ್ಯದ ಯಾವುದೇ ಲಕ್ಷಣ ಇಲ್ಲದೇ ಇರುವುದರಿಂದ ಡಿನೋಟಿಫಿಕೇಷನ್ ಮಾಡಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಾಪಸ್ ಪಡೆಯಲಾಗುವುದು ಎಂದು ತಿಳಿಸಿದರು.
ಎಚ್‌ಎಂಟಿ ವ್ಯಾಪ್ತಿಯಲ್ಲಿರುವ ೧೮೦ ಎಕರೆ ಅರಣ್ಯ ಭೂಮಿಯ ಡಿನೋಟಿಫಿಕೇಶನ್‌ಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ೨೦೧೫ರಲ್ಲಿ ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೇ ಮತ್ತು ಉನ್ನತ ಮಟ್ಟದ ಸಮಿತಿಯ ಅನುಮೋದನೆ ಪಡೆಯದೇ ಸುಪ್ರೀಂ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಾಪಸ್ ಪಡೆಯುವುದರ ಜತೆಗೆ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮಧ್ಯಂತರ ಅರ್ಜಿಯನ್ನು ಹಿಂದಕ್ಕೆ ಪಡೆಯುವ ವಿಚಾರದಲ್ಲಿ ಅರಣ್ಯ ಸಚಿವರು ತೆಗೆದುಕೊಂಡಿರುವ ನಿರ್ಣಯಕ್ಕೆ ಸಂಪುಟ ಸಭೆ ಘಟನೋತ್ತರ ಮಂಜೂರಾತಿ ನೀಡಿದೆ ಎಂದು ಹೇಳಿದರು. ೨೦೧೫ರಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯ ಹಲವು ಸಭೆಗಳಲ್ಲಿ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ ಕುರಿತು ಚರ್ಚೆ ನಡೆಸಲಾಗಿತ್ತು. ೨೦೧೮ರ ಜುಲೈ ೧೭ರಂದು ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಯಲ್ಲಿ, ಇನ್ನೂ ಹಸಿರು ಹೊದಿಕೆಯನ್ನು ಹೊಂದಿದ ಅರಣ್ಯ ಭೂಮಿಯನ್ನು ಎಚ್‌ಎಂಟಿ ಸಂಸ್ಥೆ ಮಾರಾಟ ಮತ್ತು ಹರಾಜು ಮಾಡುತ್ತಿದ್ದು, ಇದು ಬೆಂಗಳೂರಿನ ಶ್ವಾಸಕೋಶದಂತಹ ಸ್ಥಳವಾಗಿದೆ. ಅಲ್ಲಿ ಹಸಿರು ಉಳಿಸುವುದು ಅಗತ್ಯ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು. ೨೦೨೦ರ ಜುಲೈ ೧೫ರಂದು ನಡೆದ ಸಭೆಯಲ್ಲಿ ಡಿನೋಟಿಫಿಕೇಶನ್ಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆಗೆ ಸಲ್ಲಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು.
ಆದರೆ, ಅಧಿಕಾರಿಗಳು ಸಚಿವ ಸಂಪುಟ ಸಭೆಗೆ ತರದೇ, ತಮ್ಮಷ್ಟಕ್ಕೇ ತಾವೇ ಸುಪ್ರೀಂ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಕಾಯ್ದಿರಿಸಿದ ಅರಣ್ಯ ಭೂಮಿ ಡಿನೋಟಿಫೈ ಮಾಡಲು ಮಧ್ಯಂ ತರ ಅರ್ಜಿ ಸಲ್ಲಿಸಿರುವುದು ಕರ್ತವ್ಯ ಲೋಪ ಎಂದು ಪಾಟೀಲ ಹೇಳಿದರು. ಎಚ್‌ಎಂಟಿ ಸಂಸ್ಥೆಯು ಈ ಎಲ್ಲಾ ಭೂಮಿಯನ್ನು ಇತರೆ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿರುವುದರಿಂದ ರಾಜ್ಯಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತದೆ ಮತ್ತು ಬೆಂಗಳೂರಿಗರು ಅಮೂಲ್ಯ ಹಸಿರು ಪ್ರದೇಶವನ್ನು ಕಳೆದುಕೊಂಡಂತೆ ಆಗುತ್ತದೆ ಎಂದು ಕಾನೂನು ಇಲಾಖೆ ಅಭಿಪ್ರಾಯ ನೀಡಿದೆ ಎಂದು ಅವರು ತಿಳಿಸಿದರು.
ಅರಮನೆ ಮಾಲೀಕತ್ವ ವಿಷಯ ಇತ್ಯರ್ಥ: ಸುಪ್ರೀಂ’ಗೆ ಮನವಿ ಬೆಂಗಳೂರು ಅರಮನೆಯನ್ನು ವಶಪಡಿಸಿಕೊಂಡಿರುವ ೧೯೯೭ರ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿಯಲು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆ ನಡೆಸಿ, ಪ್ರಕರಣವನ್ನು ಬೇಗನೆ ಇತ್ಯರ್ಥ ಪಡಿಸಬೇಕು ಎಂದು ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸುಪ್ರೀಂ ಕೋರ್ಟ್ ೨೦೨೪ರ ಡಿಸೆಂಬರ್ ೧೦ರಂದು ನೀಡಿದ ತೀರ್ಪಿನ ಪ್ರಕಾರ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ ೧೫ ಎಕರೆ ೧೭.೫ ಗುಂಟೆ ಜಮೀನು ಉಪಯೋಗಿಸಿಕೊಳ್ಳುವುದಕ್ಕೆ ನಿಗದಿಪಡಿಸಿದ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ದರದ ಬಗ್ಗೆ ಸಚಿವ ಸಂಪುಟ ಇಂದು ವಿಸ್ತೃತವಾಗಿ ಚರ್ಚಿಸಿತು. ನ್ಯಾಯಾಂಗ ನಿಂದನೆ ಅರ್ಜಿಯ ವಿಷಯದಲ್ಲಿ ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು ಎಂದರು.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಬಳ್ಳಾರಿ ರಸ್ತೆಯ ಬದಿಯಲ್ಲಿ ಪ್ರತಿ ಚದರ ಮೀಟರ್ಗೆ ರೂ. ೨,೮೩,೫೦೦ ಮತ್ತು ಜಯಮಹಲ್ ರಸ್ತೆಯ ಕಡೆ ಪ್ರತಿ ಚದರ ಮೀಟರ್ಗೆ ರೂ. ೨,೦೪,೦೦೦ರಂತೆ ಒಟ್ಟು ರೂ. ೩,೦೧೧ ಕೋಟಿ ಟಿಡಿಆರ್ ಪಾವತಿಸಬೇಕು. ಇದು ಸರ್ಕಾರಕ್ಕೆ ಆರ್ಥಿವಾಗಿ ಹೊರೆ ಆಗುತ್ತದೆ. ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಅಪೀಲು ಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಗಿದೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು.