Sunday, April 20, 2025
Google search engine

Homeರಾಜ್ಯಸುದ್ದಿಜಾಲತುರ್ತು ಅಧಿವೇಶನ ನಡೆಸಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸುಗ್ರೀವಾಜ್ಞೆ ಜಾರಿಗೆ ತನ್ನಿ: ಮುಖ್ಯಮಂತ್ರಿ ಚಂದ್ರು

ತುರ್ತು ಅಧಿವೇಶನ ನಡೆಸಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸುಗ್ರೀವಾಜ್ಞೆ ಜಾರಿಗೆ ತನ್ನಿ: ಮುಖ್ಯಮಂತ್ರಿ ಚಂದ್ರು


ಬೆಂಗಳೂರು: ಸಂಕಷ್ಟದ ಕಾಲದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಬಂಗಾರಪ್ಪರಂತೆ ಸುಗ್ರೀವಾಜ್ಞೆ ಜಾರಿಗೆ ತರಬೇಕು. ಇದಕ್ಕಾಗಿ ಕೂಡಲೇ ತುರ್ತು ಅಧಿವೇಶನ ಕರೆದು ಕಠಿಣ ನಿರ್ಧಾರಕ್ಕೆ ಮುಂದಾಗಬೇಕು, ಸರ್ಕಾರ ಹೋದರೂ ಚಿಂತೆ ಇಲ್ಲ ನೀರು ಬಿಡಲು ಸಾಧ್ಯವಿಲ್ಲ ಎನ್ನುವ ನಿಲುವು ಪ್ರಕಟಿಸಬೇಕು ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರ್ನಾಟಕ ಜಲ ಸಂರಕ್ಷಣಾ ಸಮಿತಿಯಿಂದ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿಂದು, ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸಲು ಚಿಂತನ ಮಂಥನ ವಿಚಾರಗೋಷ್ಟಿ ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಕೂಡ ನೀರು ನಿರ್ವಹಣಾ ಪ್ರಾಧಿಕಾರದ ಪರ ತೀರ್ಪು ನೀಡಿದೆ ಇದಕ್ಕೆ ಕಾರಣರಾದ ರಾಜ್ಯ, ಕೇಂದ್ರ ಸರ್ಕಾರ, ಎಜಿ ಇತರರ ನಡೆಯನ್ನು ಖಂಡಿಸುತ್ತೇನೆ, ವಾದ ಮಾಡುವಲ್ಲಿ ವೈಫಲ್ಯರಾಗಿದ್ದಾರೆ ಎಂದು ಕಿಡಿಕಾರಿದರು.

ಈ ಬಾರಿ ನೀರು ಬಿಡುವುದು ಅನುಮಾನ ಎಂದು ಅರಿತು ಮೊದಲೇ ತಮಿಳುನಾಡಿನವರು ಸುಪ್ರೀಂ ಕೋರ್ಟ್‌ಗೆ ಅಪೀಲ್ ಹೋಗುತ್ತಾರೆ ಆದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಯಾಕೆ ಮೊದಲೇ ಹೋಗಲಿಲ್ಲ. ಪ್ರಾಧಿಕಾರ ಕೇಂದ್ರದ ಆದೇಶದ ಮೇಲೆ ಮಾಡಲಾಗಿದೆ, ನಿರ್ವಹಣಾ ಮಂಡಳಿ ಕೂಡ ಕೇಂದ್ರದ್ದೇ ಆಗಿದೆ, ನಿಮ್ಮ ಹಿಡಿತ ಎಲ್ಲಿದೆ, ನೀವು ರಾಜಕಾರಣ ಬಿಡಿ ಕೂಡಲೇ ತುರ್ತು ಅಧಿವೇಶನ ಕರೆದು ಹಿಂದೆ ಬಂಗಾರಪ್ಪ ಮಾಡಿದಂತೆ ನಿರ್ಧಾರ ಮಾಡಿ, ಸಂಕಷ್ಟ ಸಂದರ್ಭದಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸುಗ್ರೀವಾಜ್ಞೆ ತನ್ನಿ.

ಅದಕ್ಕೆ ನಾವು ಬೆಂಬಲ ಕೊಡಲಿದ್ದೇವೆ ಎಷ್ಟು ಜನರನ್ನು ಜೈಲಿಗೆ ಹಾಕುತ್ತಾರೋ ಹಾಕಲಿ ನೋಡೋಣ? ಇದಕ್ಕೆ ಸರ್ಕಾರದವರು ಸಿದ್ದರಾಗಬೇಕು, ಸರ್ಕಾರ ಹೋದರೂ ಚಿಂತನೆಯಿಲ್ಲ, ಜೈಲಿಗೆ ಹೋದರೂ ಚಿಂತೆ ಇಲ್ಲ, ನೀರು ಬಿಡಲ್ಲ ಎಂದು ಸುಗ್ರೀವಾಜ್ಞೆ ತನ್ನಿ, ಮೇಕೆದಾಟು ಮಾಡುವ ಘೋಷಣೆ ಮಾಡಿ ಎಂದು ಆಗ್ರಹಿಸಿದರು.

ನೀರಿಲ್ಲದಾಗ ಎಲ್ಲಿ ಬಿಡೋಕೆ ಸಾಧ್ಯ ಎಂದು ವಾದ ಮಾಡುವವರೇ ಇಲ್ಲವೇ? ಪ್ರಧಾನಿ ಯಾವುದೋ ಪಕ್ಷದ ಪ್ರಧಾನಿ ಅಲ್ಲ ದೇಶಕ್ಕೆ ಪ್ರಧಾನಿ. ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ, ಮೋದಿ ಸದನ ಕರೆದು ಏನೇನೋ ಪ್ರಕಟ ಮಾಡುತ್ತಿದ್ದಾರೆ ಆದರೆ ಜಲ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಏನೇ ಇರಲಿ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ನೀವೇ ಒಂದು ಸುಗ್ರೀವಾಜ್ಞೆ ತನ್ನಿ ಎಂದು ಆಗ್ರಹಿಸಿದರು.

ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಯತಿರಾಜ್ ನಾಯ್ಡು ಮಾತನಾಡಿ, ಬಂಗಾರಪ್ಪ ಅವರಂತಹ ನಾಯಕ ಹುಟ್ಟಿಬರಬೇಕು. ಅವರಂತ ನಾಯಕ ಮತ್ತೊಬ್ಬ ಸಿಗಲಿಲ್ಲ. ಸಂಸತ್‌ನಲ್ಲಿ ಯಾವ ಸಂಸದರು ಕರ್ನಾಟಕದ ಪರ ದನಿ ಎತ್ತಲಿಲ್ಲ ಎಂದರೆ ಇವರನ್ನು ಏನೆನ್ನಬೇಕು. ಮತ್ತೆ ಮತ ಕೇಳಿಕೊಂಡು ಬಂದಾಗ ಸೀರೆ ಕೊಡಬೇಕು ನಿಮಗೆಲ್ಲ. ಸುಮಲತಾ ಹೊರತುಪಡಿಸಿ ಉಳಿದವರೆಲ್ಲಾ ಅಸಮರ್ಥರೇ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಮುಖಂಡ ನರಸಿಂಹ ಮೂರ್ತಿ ಮಾತನಾಡಿ, ಆಪರೇಷನ್ ಹಸ್ತದಲ್ಲಿ ಮಗ್ನರಾಗಿದ್ದಾರೆ. ಸಂಪೂರ್ಣ ಬಹುಮತ ಇದ್ದರೂ ಆಪರೇಷನ್‌ನಲ್ಲಿ ಮುಳುಗಿದ್ದಾರೆ. ಲೋಕಸಭೆ ಚುನಾವಣೆ ಸಿದ್ದತೆಯಲ್ಲಿದ್ದಾರೆ ಸರ್ಕಾರ ಎಷ್ಟೇ ಅರ್ಜಿ ಹಾಕಿದರೂ ಉಪಯೋಗ ಇಲ್ಲ, ದೊಡ್ಡ ಹೋರಾಟ ಮಾಡಬೇಕಿದೆ, ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಕೈಜೋಡಿಸಲಿದ್ದೇವೆ ದೊಡ್ಡ ಹೋರಾಟಕ್ಕೆ ಮುಂದಾಗಿ ಎಂದರು. ಎಲ್ಲರ ಅಭಿಪ್ರಾಯ ಆಲಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ರೈತ ನಾಯಕ ಕುರುಬೂರು ಶಾಂತಕುಮಾರ್ ತಿಳಿಸಿದರು.

RELATED ARTICLES
- Advertisment -
Google search engine

Most Popular