ಚಿಕ್ಕಮಗಳೂರು/ಕಾಸರಗೋಡು: ಕಾಫಿನಾಡು, ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಾಳೆ (ಜುಲೈ 31) ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಆರು ತಾಲೂಕಿನ ಅಂಗನವಾಡಿ, ಸರ್ಕಾರಿ, ಖಾಸಗಿ ಶಾಲೆ, ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜಿಗಳಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ಘೋಷಿಸಿ ಆದೇಶಿಸಿದ್ದಾರೆ.
ಧಾರಾಕಾರ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಚಿಕ್ಕಮಗಳೂರು, ತಾಲೂಕುಗಳಿಗೆ ಅನ್ವಯವಾಗುವಂತೆ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆಯೂ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಗಡಿಜಿಲ್ಲೆ ಕಾಸರಗೋಡಿನಲ್ಲೂ ಶಾಲೆ-ಕಾಲೇಜುಗಳಿಗೆ ರಜೆ:
ಇತ್ತ ರಾಜ್ಯದ ಗಡಿ ಜಿಲ್ಲೆಯಾದ ಕಾಸರಗೋಡಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ರೆಡ್ ಅಲರ್ಟ್ ಜಾರಿಯಲ್ಲಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಕಾಲೇಜುಗಳು, ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳು, ಸಿ ಬಿಎಸ್ ಇ ಶಾಲೆಗಳು, ಐ ಸಿ ಎಸ್ ಸಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಅಂಗನವಾಡಿಗಳು ಮತ್ತು ಮದ್ರಸಾಗಳಿಗೆ ನಾಳೆ (ಬುಧವಾರ, ಜುಲೈ 31) ಜಿಲ್ಲಾಧಿಕಾರಿ ಕೆ. ಇಂಬಾ ಶೇಖರ್ ರಜೆ ಘೋಷಿಸಿದ್ದಾರೆ. ಪೂರ್ವ ಘೋಷಿತ ಪರೀಕ್ಷೆಗಳಿಗೆ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.