ಮೈಸೂರು: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ದಿಯಾದ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಇಂದು ಮಾಘ ಪೂರ್ಣಿಮೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. ಫೆಬ್ರವರಿ 10ರಿಂದ ತಿರುಮಕೂಡಲಿನಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಕುಂಭಮೇಳದಲ್ಲಿ ಇಂದು ಕೊನೆಯ ದಿನ.
ಸಂಗಮದಲ್ಲಿ ಈ ಸಲ 6 ವರ್ಷಗಳ ಬಳಿಕ ಕುಂಭಮೇಳ ನಡೆಯುತ್ತಿದೆ. ಕಾವೇರಿ, ಕಪಿಲಾ ಹಾಗೂ ಸ್ಪಟಿಕ ನದಿಗಳು ಸಂಗಮವಾಗುವ ಸ್ಥಳದಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆಯುತ್ತವೆ ಎಂಬುದು ಜನರ ನಂಬಿಕೆ.
ಸೋಮವಾರ ಆರಂಭವಾದ ಕುಂಭಮೇಳಕ್ಕೆ ತಂಡೋಪತಂಡವಾಗಿ ಆಗಮಿಸಿದ ಭಕ್ತರು ಅಗಸ್ತೇಶ್ವರ, ಗುಂಜಾ ನರಸಿಂಹಸ್ವಾಮಿ ಹಾಗೂ ಭಿಕ್ಷೇಶ್ವರ ಸ್ವಾಮಿ ದೇಗುಲಗಳಲ್ಲಿ ದೇವರ ದರ್ಶನ ಪಡೆದು, ನಂತರ ಪುಣ್ಯಸ್ನಾನ ಮಾಡಿದರು. ಹಳೆ ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆ ಮಾತ್ರವಲ್ಲದೇ, ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಸೇರಿದಂತೆ, ರಾಜ್ಯದ ಮಧ್ಯ ಹಾಗೂ ಉತ್ತರ ಭಾಗದ ಜಿಲ್ಲೆಗಳಿಂದಲೂ ಭಕ್ತರು ಹರಿದು ಬಂದಿದ್ದರು.
ನೆರೆಯ ರಾಜ್ಯಗಳಾದ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಿಂದಲೂ ಭಕ್ತರು ಆಗಮಿಸಿದ್ದಾರೆ. ಈ ಹಿಂದಿನಿಂದಲೂ ಮೂರು ವರ್ಷಕ್ಕೊಮ್ಮೆ ಜರುಗುವ ಈ ಕುಂಭಮೇಳವು ಕೋವಿಡ್ ಕಾರಣ 2022ರಲ್ಲಿ ನಡೆದಿರಲಿಲ್ಲ. ಪ್ರಯಾಗರಾಜ್ನಲ್ಲಿ ಮಹಾಕುಂಭಮೇಳ ನಡೆಯುತ್ತಿದ್ದು, ಅಲ್ಲಿಯೂ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಅಂತೆಯೇ, ಆರು ವರ್ಷದ ನಂತರ ತಿರುಮಕೂಡಲಿನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು.