ಪುತ್ತೂರು: ಕೋಲಾರ ಜಿಲ್ಲೆಯಲ್ಲಿ ಆರಂಭಿಸಿದ ಗೃಹ ಆರೋಗ್ಯ ಯೋಜನೆ ಯಶಸ್ಸು ಕಂಡಿದ್ದು, ಶೀಘ್ರವೇ ರಾಜ್ಯಾದ್ಯಂತ ವಿಸ್ತರಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಪತ್ರಕರ್ತರ ಜತೆ ಮಾತನಾಡಿದ ಅವರು, ರಕ್ತದೊತ್ತಡ, ಮಧು ಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ರಮೇಣ ಇದು ಬೇರೆ ಕಾಯಿಲೆಗಳಿಗೂ ದಾರಿ ಮಾಡುತ್ತದೆ. ಗೃಹ ಆರೋಗ್ಯ ಯೋಜನೆ ಯಡಿ ಕೋಲಾರದಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಇದರಿಂದ ಸಮಸ್ಯೆಗಳನ್ನು ಆರಂಭದಲ್ಲೇ ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.
ಆರು ತಾಲೂಕುಗಳಲ್ಲಿ ಹೊಸ ತಾಲೂಕು ಸರಕಾರಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಇದರಲ್ಲಿ 4 ಕಾಂಗ್ರೆಸ್ ಬೆಂಬಲಿತ ಶಾಸಕರ ಕ್ಷೇತ್ರವಾಗಿದ್ದರೆ, ಎರಡು ಬಿಜೆಪಿ ಬೆಂಬಲಿತ ಶಾಸಕರ ಕ್ಷೇತ್ರ. ನಮ್ಮ ಸರಕಾರ ಅಗತ್ಯ ಆಧಾರದಲ್ಲಿ ಯೋಜನೆಗಳನ್ನು ನೀಡುತ್ತಿದೆಯೇ ಹೊರತು ರಾಜಕೀಯದಿಂದಲ್ಲ ಎಂದರು.