ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈ ಬಾರಿ ಐಪಿಎಲ್‌ನಲ್ಲಿ ತನ್ನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುವ ಬಗ್ಗೆ ಫ್ರಾಂಚೈಸಿ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದು, ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ “ನಮ್ಮ ಹೃದಯ ಇರುವ ಸ್ಥಳವೇ ಮನೆ” ಎಂದು ಪೋಸ್ಟ್ ಮಾಡುವ ಮೂಲಕ ತವರಿನಲ್ಲಿ ಪಂದ್ಯಾವಳಿ ಆಡುವ ಸುಳಿವು ನೀಡಿದೆ.

ಕಳೆದ ವರ್ಷ ಜೂನ್‌ನಲ್ಲಿ ನಡೆದ ಭೀಕರ ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಮುಖ ಪಂದ್ಯ, ಟೂರ್ನಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರವು ಚಿನ್ನಸ್ವಾಮಿಯಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಗೆ ಷರತ್ತುಬದ್ಧ ಅನುಮತಿ ನೀಡಿತ್ತಾದರೂ ಆರ್‌ಸಿಬಿಯು ಕೆಲ ಕಾರಣಗಳಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುತ್ತಿತ್ತು. ಕೆಎಸ್‌ಸಿಎ ಪದಾಧಿಕಾರಿಗಳು ಕೂಡಾ ಚಿನ್ನಸ್ವಾಮಿಯಲ್ಲಿ ಆಡುವಂತೆ ಆರ್‌ಸಿಬಿಗೆ ಮನವಿ ಮಾಡಿದ್ದರೂ ಅದಕ್ಕೆ ಫ್ರಾಂಚೈಸಿಯು ಒಪ್ಪಿರಲಿಲ್ಲ. ಚಿನ್ನಸ್ವಾಮಿ ಪಂದ್ಯಗಳನ್ನು ನಡೆಸುವ ವಿಚಾರದಲ್ಲಿ ಸರ್ಕಾರ ನ್ಯಾ.ಮೈಕಲ್ ಕುನ್ಹಾ ಸಮಿತಿಯನ್ನು ರಚಿಸಿ ವರದಿ ಕೇಳಿತ್ತು.
ಇತ್ತೀಚೆಗೆ ಈ ಸಮಿತಿ ವರದಿಯನ್ನೂ ಸಲ್ಲಿಸಿದ್ದು, ಆದರೆ ವರದಿಯಲ್ಲಿರುವ ಕೆಲ ಅಂಶಗಳನ್ನು ಫ್ರಾಂಚೈಸಿ ಒಪ್ಪಿಲ್ಲ ಎನ್ನಲಾಗಿತ್ತು. ಆರ್‌ಸಿಬಿ ತಂಡದ ಮಾರಾಟ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಮಾರ್ಚ್ ಮಧ್ಯಭಾಗದಲ್ಲಿ ಹೊಸ ಮಾಲೀಕರು ಯಾರೆಂದು ಖಚಿತವಾಗಲಿದೆ. ಆರ್‌ಸಿಬಿ ಒಡೆತನ ಹೊಂದಿರುವ ಡಿಯಾಜಿಯೋ ಕಂಪನಿ, ಕೊನೆ ಹಂತದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರ ಪಟ್ಟಿಯನ್ನು ಈಗಾಗಲೆ ಅಂತಿಮಗೊಳಿಸಿದೆ.
ಇನ್ನೂ ಮಾರ್ಚ್ 10ರಂದು ಅಂತಿಮ ಹಂತದ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದ್ದು, 2026ರ ಮಾರ್ಚ್ 31ರೊಳಗೆ ಆರ್‌ಸಿಬಿ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಡಿಯಾಜಿಯೋ ಕಳೆದ ವರ್ಷ ನವೆಂಬರ್ನಲ್ಲೇ ತಿಳಿಸಿತ್ತು.
ಆರ್ಸಿಬಿಯ ಹಾಲಿ ಮಾಲೀಕರು 18,186 ಕೋಟಿ ರೂ. (2 ಶತಕೋಟಿ ಡಾಲರ್) ಮೌಲ್ಯ ನಿಗದಿಪಡಿಸಿದ್ದಾರೆ. ಆದರೆ ಇತ್ತೀಚೆಗೆ ನಡೆದ ಪ್ರಾಥಮಿಕ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ 13,640 ಕೋಟಿ ರೂ.ನಿಂದ 16.368 ಕೋಟಿ ರೂ.ವರೆಗೆ (1.5ರಿಂದ 1.8 ಶತಕೋಟಿ ಡಾಲರ್) ಬಿಡ್ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಬಿಡ್ಡರ್ಗಳು ಕೊನೇ ಹಂತದಲ್ಲಿ ತಮ್ಮ ಬಿಡ್ ಮೊತ್ತವನ್ನು ಪರಿಷ್ಕರಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ಮ್ಯಾಂಚೆಸ್ಟರ್ ಯುನೈಟೆಡ್ ಸಹ-ಮಾಲೀಕರಾದ ಅವ್ರಾಮ್ ಗ್ಲೇಜರ್, ಸೆರಮ್ ಇಂಡಿಯಾದ ಸಿಇಒ ಅದರ್ ಪೂನಾವಾಲ, ಮಣಿಪಾಲ್ ಗ್ರೂಪ್ ಚೇರ್ಮನ್ ಡಾ.ರಂಜನ್ ಪೈ, ಅಮೆರಿಕದ ಶತಕೋಟಿ ಉದ್ಯಮಿ ಡೇವಿಡ್ ಬ್ಲಿಟ್ಜರ್, ಭಾರತದ ಉದ್ಯಮಿಗಳಾದ ಗೌತಮ್ ಅದಾನಿ, ಪಾರ್ಥ ಜಿಂದಾಲ್ (ಜೆಎಸ್ಡಬ್ಲ್ಯು) ಆರ್‌ಸಿಬಿ ಖರೀದಿ ರೇಸ್ನಲ್ಲಿರುವ ಪ್ರಮುಖರು.



