ಸೋಮನಾಳ: ಅನುಮಾನಾಸ್ಪದ ರೀತಿಯಲ್ಲಿ ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ ಐ ಪರಶುರಾಮ್ ಅವರ ಕುಟುಂಬದವರಿಗೆ ಗೃಹ ಸಚಿವ ಜಿ. ಪರಮೇಶ್ವರ್ ಸಾಂತ್ವನ ಹೇಳಿದರು. ಈ ವೇಳೆ ಪರಶುರಾಮ ಪತ್ನಿಗೆ ಸರಕಾರಿ ಕೆಲಸ ಹಾಗೂ ಅವರ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಘೋಷಿಸಿದರು.
ಪರಶುರಾಮ್ ಸ್ವಗ್ರಾಮ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮಕ್ಕೆ ಇಂದು ಬುಧವಾರ ಬಂದ ಸಚಿವರು ಮೊದಲು ಕುಟುಂಬದವರ ಜೊತೆ ಮಾತನಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಪರಶುರಾಮ್ ಸಾವಿನ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು, ಇದರ ಬಗ್ಗೆ ಯಾವುದೇ ಅಪನಂಬಿಕೆ ಬೇಡ, ನಮ್ಮ ಸರ್ಕಾರ ಈ ಪ್ರಕರಣವನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತದೆ ಎಂದು ಭರವಸೆ ನೀಡಿದರು.