ಶ್ರೀ ಕಾಗಿನೆಲೆ ಕೆ.ಆರ್ ನಗರ ಶಾಖೆಯ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿಗಳು
ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ದೀಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿರಿಯಾಪಟ್ಟಣ: ಸಾರ್ವಜನಿಕ ಕ್ಷೇತ್ರದಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದರೆ ದೇವರು ಸಹ ಮೆಚ್ಚುತ್ತಾನೆ ಎಂದು ಶ್ರೀ ಕಾಗಿನೆಲೆ ಕೆ.ಆರ್ ನಗರ ಶಾಖೆಯ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿಗಳು ಹೇಳಿದರು.
ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ದೀಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರೋಗ್ಯ ಮತ್ತು ಭಾಗ್ಯ ಮನುಷ್ಯನಿಗೆ ಅತಿ ಮುಖ್ಯವಾದದ್ದು ಆರೋಗ್ಯದಿಂದಿದ್ದರೆ ಮನುಷ್ಯನಿಗೆ ಯಾವುದೇ ತೊಂದರೆಯಿಲ್ಲದೆ ಮಾನಸಿಕವಾಗಿ ನೆಮ್ಮದಿಯಿಂದ ಇರಬಹುದು, ವೈದ್ಯೋ ನಾರಾಯಣ ಹರಿ ಎಂಬಂತೆ ಮಾನವರ ಕಾಯಿಲೆಗಳ ಸಂದರ್ಭ ಸೂಕ್ತ ಚಿಕಿತ್ಸೆ ನೀಡಿ ಗುಣಮುಖ ಮಾಡುವ ವೈದ್ಯರ ಪಾತ್ರ ಬಹಳ ಮಹತ್ವದಾಗಿದೆ, ಸಾರ್ವಜನಿಕರಿಗೆ ತುರ್ತು ಸಂದರ್ಭ ಉತ್ತಮ ಚಿಕಿತ್ಸೆ ನೀಡಬೇಕೆಂಬ ನಿಟ್ಟಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆದಿರುವುದು ಶ್ಲಾಘನೀಯ ಎಂದರು.
ಹಾವೇರಿ ಜಿಲ್ಲೆ ಹೂವಿನಸಿಗ್ಲಿ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಜಿಗಳು ಮಾತನಾಡಿ ಯಾವುದೇ ಜೀವಿ ಜನನ ಮತ್ತು ಮರಣ ತೀರ್ಮಾನ ಯಾರ ಕೈಯಲ್ಲಿ ಇಲ್ಲ ಸೃಷ್ಟಿಕರ್ತನಿಂದ ಮಾತ್ರ ಸಾಧ್ಯ, ದೇವಾಲಯಕ್ಕಿಂತ ಆಸ್ಪತ್ರೆಗಳು ಹೆಚ್ಚು ಉದ್ಘಾಟನೆಯಾದಂತೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯಬಹುದು, ಆರೋಗ್ಯದ ವಿಚಾರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕಾರ್ಯ ಸ್ಮರಣೀಯವಾದದು ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಮಾತನಾಡಿ ಪೋಷಕರು ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು, ಹಾಡಿ ಹಾಗೂ ಪೌರಕಾರ್ಮಿಕರ ಮಕ್ಕಳಿಗೆ ಹೆಚ್ಚು ವಿದ್ಯಾಭ್ಯಾಸ ನೀಡುವುದು ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕು, ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಗಮನ ಹರಿಸಿ ಅದಕ್ಕೆ ಬೇಕಾಗುವ ಸಹಾಯಧನ ವಿತರಣೆ ನಿಗದಿಕಾಲಕ್ಕೆ ಮಾಡಬೇಕು, ಸರ್ಕಾರ ಯಶಸ್ವಿನಿ ಯೋಜನೆ ಜಾರಿಗೆ ತಂದಿರುವುದು ಸಂತಸದ ವಿಷಯ ಎಂದರು.
ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ ಅವರು ಮಾತನಾಡಿ ಸಾರ್ವಜನಿಕ ಸೇವೆ ನೀಡಲು ಯಾವುದೇ ಜಾತಿ ಧರ್ಮದ ಬೇದಭಾವವಿಲ್ಲ, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗಬೇಕು ಈ ನಿಟ್ಟಿನಲ್ಲಿ ದೀಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಳೀಯವಾಗಿ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದರು.
ವೇದಿಕೆ ಕಾರ್ಯಕ್ರಮ ಮುನ್ನ ಪಶು ಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವರಾದ ಕೆ.ವೆಂಕಟೇಶ್ ಅವರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಶುಭ ಕೋರಿದರು.
ಈ ಸಂದರ್ಭ ಮುಖ್ಯಸ್ಥರಾದ ಡಾ.ಲೋಹಿತ್, ಕುರುಬ ಸಮಾಜ ತಾಲ್ಲೂಕು ಅಧ್ಯಕ್ಷ ಟಿ.ಡಿ ಗಣೇಶ್, ವಕೀಲ ಬಿ.ವಿ ಜವರೇಗೌಡ, ನಾಯಕ ಸಮಾಜ ತಾಲ್ಲೂಕು ಅಧ್ಯಕ್ಷ ಪುಟ್ಟಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಇ.ಪಿ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು, ಡಿ.ಟಿ ಸ್ವಾಮಿ, ದಸಂಸ ಮುಖಂಡ ವಿಜಯ್ ಕುಮಾರ್, ಪುರಸಭಾ ಸದಸ್ಯರಾದ ಎಚ್.ಕೆ ಮಂಜುನಾಥ್, ಪಿ.ವಿ ರವಿ, ಯುವ ಮುಖಂಡ ಪಂಚವಳ್ಳಿ ಲೋಹಿತ್, ಈಚೂರು ಮಂಜು, ಜಗದೀಶ್, ಸಾಲುಕೊಪ್ಪಲು ಪುಟ್ಟರಾಜು, ಸಮಾಜ ಸೇವಕ ಶಿವಣ್ಣ, ಶಿಕ್ಷಕ ಮಧುರೇಶ್ ಮತ್ತಿತರಿದ್ದರು.