ಕಲಬುರಗಿ: ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಗರ್ಭ ಧರಿಸಲು ಕಾರಣವಾಗಿದ್ದ ವಿದ್ಯಾರ್ಥಿನಿ ಸೋದರ ಸಂಬಂಧಿಯನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳೀಯ ಶಿಕ್ಷಣ ಇಲಾಖೆಯು ಕಲಬುರಗಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ವಾರ್ಡನ್ ಅವರನ್ನು ನಿರ್ಲಕ್ಷ್ಯದ ಆರೋಪದಲ್ಲಿ ಅಮಾನತುಗೊಳಿಸಿದೆ. ಪೋಲೀಸರ ಪ್ರಕಾರ, ವಸತಿ ಶಾಲೆಯ ವಿದ್ಯಾರ್ಥಿಯಾಗಿದ್ದ ಸಂತ್ರಸ್ತೆ ಡಿಸೆಂಬರ್ ೨೮, ೨೦೨೩ ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಸಂತ್ರಸ್ತೆ ತನ್ನ ನವಜಾತ ಮಗುವಿನೊಂದಿಗೆ ಪ್ರಸ್ತುತ ಕಲಬುರಗಿಯ ಅಮೂಲ್ಯ ಶಿಶು ಗೃಹದಲ್ಲಿ ನೆಲೆಸಿದ್ದಾಳೆ, ಬಾಲಕಿ ಹೊಟ್ಟೆನೋವು ಎಂದು ಶಾಲೆಯ ಅಧಿಕಾರಿಗಳಿಗೆ ದೂರು ನೀಡಿದ ನಂತರ ಆಕೆಯನ್ನು ಪೋಷಕರ ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೋವು ಹೆಚ್ಚಾದಾಗ ಪೋಷಕರು ಬಾಲಕಿಯನ್ನು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಕ್ಯಾನ್ ಮಾಡಿದ ನಂತರ ವೈದ್ಯರು ಆಕೆ ಗರ್ಭಿಣಿ ಎಂದು ಪತ್ತೆ ಮಾಡಿದರು. ಬಳಿಕ ಬಾಲಕಿಯ ಸೋದರ ಸಂಬಂಧಿ ಸಹೋದರ ಆಕೆಯೊಂದಿಗೆ ಶಾರೀರಿಕ ಸಂಬಂಧ ಬೆಳೆಸಿರುವುದು ಬೆಳಕಿಗೆ ಬಂದಿದೆ. ನಿರ್ಲಕ್ಷ್ಯ ತೋರಿದ ಪ್ರಾಂಶುಪಾಲರು ಹಾಗೂ ವಾರ್ಡನ್ ಅವರನ್ನು ಅಮಾನತು ಮಾಡಲಾಗಿದೆ. ಸದ್ಯ ನಿಂಬರಗಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.