ಮೈಸೂರು : ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಓದಲು ಬರುವ ಬಡ ಹೆಣ್ಣುಮಕ್ಕಳಿಗೆ ಹಾಸ್ಟೆಲ್‌ಗಳು ತವರು ಮನೆ ಇದ್ದ ಹಾಗೆ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ ಸವಿತಾ ತಿಳಿಸಿದರು.
ಭೋಗಾದಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಭೋಗಾದಿ-೨ ರಲ್ಲಿ ನಡೆದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ಬಿ.ಸಿ.ಎಂ ಹಾಸ್ಟೆಲ್ಲಿನಲ್ಲಿ ಓದಿದ ವಿದ್ಯಾರ್ಥಿ.ಆಗ ಬಿ.ಸಿ.ಎಂ ಜಿಲ್ಲಾ ಅಧಿಕಾರಿಯಾಗಿದ್ದ ಎಂ. ರಾಮಯ್ಯರವರು ನನಗೆ ಸೀಟ್ ಕೊಟ್ಟಿದ್ದರು. ಈಗಿರುವಷ್ಟು ಸೌಲಭ್ಯ ನಮಗೆ ಇರಲಿಲ್ಲ. ವಿದ್ಯಾರ್ಥಿನಿಯರಿಗೆ ಜ್ಞಾನದ ಹಸಿವಿರಬೇಕು ನಿರಂತರವಾಗಿ ಓದುತ್ತಿರಬೇಕು. ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿ,ಪತ್ರಿಕೆಗಳನ್ನು ಓದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಿರಿ. ನಿಮ್ಮ ತಂದೆ ತಾಯಿಯರ ಕಷ್ಟಗಳನ್ನು ನೆನಪಿಸಿಕೊಂಡು ಗುರಿಸಾಧಿಸಿ ನಿಮ್ಮ ಭವಿಷ್ಯವನ್ನು ನೀವೇ ರೂಡಿಸಿಕೊಳ್ಳಬೇಕು. ಹೆಣ್ಣು ಮಕ್ಕಳು ಪ್ರತಿ ಹಂತದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.

ಅಕ್ಕಾ ಐ.ಎ.ಎಸ್ ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್ ಮಾತನಾಡಿ ವಿದ್ಯಾರ್ಥಿನಿಯರು ಪ್ರತಿದಿನ ೫ ಗಂಟೆ ಓದಬೇಕು,ಇಂಗ್ಲಿಷ್ ಜ್ಞಾನವನ್ನು ಬೆಳೆಸಿಕೊಳ್ಳಿರಿ.ಓದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ೫ ವರ್ಷ ಕಷ್ಟಪಟ್ಟು ಓದಿದರೆ ೫೦ ವರ್ಷ ರಾಣಿಯಂತೆ ಬದುಕಬಹುದು ಎಂದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಮಾತನಾಡಿ ವಿದ್ಯಾರ್ಥಿನಿಯರು ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಅಂದಿನ ಕೆಲಸವನ್ನು ಅಂದೇ ಮುಗಿಸಬೇಕು. ತಂದೆ ತಾಯಿಯರಕನಸನ್ನು ನನಸು ಮಾಡಬೇಕು. ಗುರಿಇಟ್ಟುಕೊಂಡು ಸಾಧನೆ ಮಾಡಬೇಕು ಎಂದರು.
ಸಮಾರಂಭದಲ್ಲಿ ಸಹಾಯಕ ನಿರ್ದೇಶಕ ಸಿದ್ದಲಿಂಗು, ನಿಲಯಪಾಲಕರಾದ ಚಂದ್ರಮ್ಮ, ಎಂ. ಚಿಕ್ಕೀರಯ್ಯ, ಮಹೇಶ್, ಕಾರ್ತಿಕ್ ಹಾಜರಿದ್ದರು.