ಮಂಡ್ಯ: ರಾತ್ರಿ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕಿರುಗಾವಲು ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದ್ದು , ಸುಮಾರು 14 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಕೆ.ಎಂ.ದೊಡ್ಡಿಯ ಅಣ್ಣೂರು ಗ್ರಾಮದ ಶೇಖರ್, ಹಾಗೂ ಕ್ಯಾತಘಟ್ಟ ಗ್ರಾಮದ ಕೃಷ್ಣ, ವೆಂಕಟೇಶ್, ಬಂಧಿತ ಆರೋಪಿಗಳು. ಆರೋಪಿಗಳಿಂದ ಬರೋಬ್ಬರಿ 47 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ರಾತ್ರಿ ವೇಳೆ ಮನೆಗಳ ಬೀಗಮುರಿದು ಕಳ್ಳತನ ಮಾಡ್ತಿದ್ದ ಈ ಖತರ್ನಾಕ್ ಕಳ್ಳರು. ಇವರಿಂದ ಸುಮಾರು 670 ಗ್ರಾಂ ಚಿನ್ನ, 170 ಗ್ರಾಂ ಬೆಳ್ಳಿ ಹಾಗೂ ಟಿವಿಎಸ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಮನೆ ಕಳ್ಳತನ ಮಾಡಿ ಬೆಂಗಳೂರು ಸೇರಿ ವಿವಿಧ ಕಡೆ ಮಾರಾಟ ಮಾಡುತ್ತಿದ್ದ ಇವರು ಕಳೆದ 30 ವರ್ಷಗಳಿಂದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಹಂದಿ ಸಾಕಾಣಿಕೆ ವ್ಯಾಪಾರ ಮಾಡಿಕೊಂಡು ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಸಿಪಿಐ ಶ್ರೀಧರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು, ಭರ್ಜರಿ ಕಾರ್ಯಚರಣೆ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ತೆ ಕಾರ್ಯದಲ್ಲಿ ಭಾಗಿಯಾದ ಪೊಲೀಸರ ಕಾರ್ಯಕ್ಕೆ ಮಂಡ್ಯದಲ್ಲಿ ಎಸ್.ಪಿ.ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.