ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಮಧ್ಯಸ್ಥಿಕೆಯ ಚೀನಾದ ಹೇಳಿಕೆಯು ದೇಶಕ್ಕೆ ಅಪಮಾನವಾಗಿದ್ದು, ಅದನ್ನು ಕೇಂದ್ರ ಸರ್ಕಾರ ಬಲವಾಗಿ ಖಂಡಿಸಬೇಕು ಎಂದು AIMEIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದು, ಚೀನಾ ಜೊತೆಗಿನ ಒಪ್ಪಂದವು ಸಹಜವಾಗಿ ಭಾರತದ ಗೌರವ ಅಥವಾ ಸಾರ್ವಭೌಮತೆಗೆ ತಕ್ಕುದಲ್ಲ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮಗಿಂತ ಮುಂಚಿತವಾಗಿ ಕದನ ವಿರಾಮ ಒಪ್ಪಂದ ಘೋಷಿಸಿದ ನಂತರ ಶಾಂತಿಯನ್ನು ಕಾಪಾಡಲು ವ್ಯಾಪಾರ ನಿರ್ಬಂಧ ಬಳಸಿದ್ದೇವೆ ಎಂದು ಹೇಳಿಕೊಂಡಿದ್ದರು. ಈಗ ಚೀನಾ ವಿದೇಶಾಂಗ ಸಚಿವರು ಕೂಡಾ ಇದೇ ರೀತಿಯ ಹೇಳಿಕೆ ನೀಡಿದ್ದು, ಇದು ಭಾರತಕ್ಕೆ ಮಾಡಿದ ಅವಮಾನವಾಗಿದೆ ಮತ್ತು ಇದನ್ನು ಸರ್ಕಾರವು ಬಲವಾಗಿ ಖಂಡಿಸಬೇಕು ಎಂದು ಒವೈಸಿ ತಡರಾತ್ರಿ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಮಟ್ಟದಲ್ಲಿ ಇರಿಸಲು ಚೀನಾ ಬಯಸಿದ್ದು, ದಕ್ಷಿಣ ಏಷ್ಯಾದಲ್ಲಿ ತನ್ನನ್ನು ತಾನು ಬಲಾಢ್ಯ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪ್ರಧಾನಿಯವರು ಚೀನಾಕ್ಕೆ ಭೇಟಿ ನೀಡಿದಾಗ ಮೋದಿ ಸರ್ಕಾರ ಇದನ್ನು ಒಪ್ಪಿಕೊಂಡಿದೆಯೇ ಎಂದು ಅವರು ಕೇಳಿದ್ದಾರೆ.
ಚೀನಾದ ವಿದೇಶಾಂಗ ಸಚಿವರ ಮಧ್ಯಸ್ಥಿಕೆಯ ಹೇಳಿಕೆ ಆಶ್ಚರ್ಯಕರವಾಗಿದೆ ಮತ್ತು ಕೇಂದ್ರವು ಅದನ್ನು ಅಧಿಕೃತವಾಗಿ ತಳ್ಳಿಹಾಕಬೇಕು ಮತ್ತು ಮೂರನೇ ವ್ಯಕ್ತಿಯ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ ಎಂದು ದೇಶಕ್ಕೆ ಭರವಸೆ ನೀಡಬೇಕು ಎಂದು ಓವೈಸಿ ಒತ್ತಾಯಿಸಿದ್ದಾರೆ. ಈ ವರ್ಷ ಚೀನಾ ಮಧ್ಯಸ್ಥಿಕೆ ವಹಿಸಿರುವ ಪ್ರಮುಖ ಬಿಕ್ಕಟ್ಟುಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯೂ ಸೇರಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.



