Monday, April 21, 2025
Google search engine

Homeಅಪರಾಧಕಾನೂನುಎಚ್‌ ಎಸ್‌ ಆರ್‌ ಪಿ ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

ಎಚ್‌ ಎಸ್‌ ಆರ್‌ ಪಿ ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ವಾಹನಗಳಿಗೆ “ಅತಿ ಸುರಕ್ಷಿತ ನೋಂದಣಿ ಫ‌ಲಕ’ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಸೆಪ್ಟಂಬರ್‌ 15ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಎಚ್‌ ಎಸ್‌ ಆರ್‌ ಪಿ ಜಾರಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿದ್ದವು.

ಈ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ ನ್ಯಾಯಪೀಠದ ಮುಂದೆ, ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ನಿಗದಿಪಡಿಸಲಾಗಿದ್ದ ಅವಧಿಯನ್ನು ಸೆ. 15ರ ವರೆಗೆ ರಾಜ್ಯ ಸರಕಾರ ವಿಸ್ತರಿಸಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಆಗ ನ್ಯಾಯಾಲಯ ನೀಡಿರುವ ಮಧ್ಯಾಂತರ ಆದೇಶದ ವಿಚಾರವಾಗಿ ನಮ್ಮ ವಾದ ಮಂಡಿಸಬೇಕಿದೆ ಎಂದು ಮೇಲ್ಮನವಿದಾರ ಕಂಪೆನಿಗಳ ಪರ ವಕೀಲರು ಕೋರಿದರು. ಅದಕ್ಕೆ, ಸರಕಾರ ಅವಧಿಯನ್ನು ಸೆ. 15ರ ವರೆಗೆ ವಿಸ್ತರಿಸಿದೆ. ಆದರೆ ಮೇಲ್ಮನವಿದಾರರ ವಾದ ಆಲಿಸಬೇಕಿದೆ ಎಂದು ಹೇಳಿದ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿತು.

1.4 ಕೋಟಿ ವಾಹನ ನೋಂದಣಿಗೆ ಬಾಕಿ!

ರಾಜ್ಯದಲ್ಲಿ ಇಲ್ಲಿವರೆಗೆ 43 ಲಕ್ಷ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದ್ದು, ಇನ್ನೂ 1.3ರಿಂದ 1.4 ಕೋಟಿ ವಾಹನಗಳು ಬಾಕಿ ಇವೆ ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular